ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

– ಸ್ಟೇಡಿಯಂ ಗೇಟ್ ನಂಬರ್ 19ರ ಬಳಿ ಅವತ್ತು ಆಗಿದ್ದೇನು?

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಆಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ನಂಬರ್ 19ರ ಬಳಿ ಸ್ಟೇಡಿಯಂ ಸಿಬ್ಬಂದಿಯಿಂದ ಆರ್‌ಸಿಬಿ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ ನಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆ ನಡೆದ ವೇಳೆ ಜನ ಅಲ್ಲಿಂದ ಪಾರಾಗಲು ಯತ್ನಿಸಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಓರ್ವ ವ್ಯಕ್ತಿ ಬ್ಯಾರಿಕೇಡ್‌ಗೆ ಸಿಕ್ಕು ನರಳುತ್ತಿರುವುದು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಗಮನಿಸಿದರೆ ಸ್ಟೇಡಿಯಂ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಪ್ರಕರಣ – ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

ಕಾಲ್ತುಳಿತಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಬುಧವಾರ 11 ಅಭಿಮಾನಿಗಳು ದಾರುಣ ಸಾವನ್ನಪ್ಪಿದ್ದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕುನುಗ್ಗಲಿಂದ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿತ್ತು.

ಇನ್ನೂ ಆರ್‌ಸಿಬಿಯ (RCB) ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆಯವರ (Nikhil Sosale) ಬಂಧನ ಆಗುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜ್‌ (K.Govindaraj) ಅವರು ಬಿಟ್ಟು ಕಳಿಸುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಗೋವಿಂದರಾಜ್‌ ಅವರನ್ನು ತಮ್ಮ‌ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಸಿಎಂ ತೆಗೆದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಕೇಸ್‌ – ಕೊಹ್ಲಿ ವಿರುದ್ಧ ದೂರು ದಾಖಲು