ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ – ಬಾವಲಿ ಸೂಪ್ ಕುಡಿದ ಯುವತಿಯೇ ಕಾರಣವೆಂದ ಚೀನಿಯರು

ಬೀಜಿಂಗ್: ವಿಶ್ವಾದ್ಯಂತ ಮಾರಾಕ ಕೊರೊನಾ ವೈರಸ್ ಹರಡುತ್ತಿರುವುದಕ್ಕೆ ಚೀನಾದ ಯುವತಿಯೊಬ್ಬಳು ಕಾರಣವೆಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾವಲಿ ಸೂಪ್ ಕುಡಿದ ಯುವತಿಯೇ ಮಾರಣಾಂತಿಕ ಕೊರೊನಾ ವೈರಸ್ ಹರಡಲು ಕಾರಣ ಎಂದು ಚೀನಿಯರು ಹೇಳುತ್ತಿದ್ದಾರೆ.

ಚೀನಾದಲ್ಲಿ ಮೊದಲು ಪತ್ತೆಯಾದ ನಿಗೂಢ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ವೈರಸ್ ತಗುಲಿ ಈವರೆಗೆ ಸುಮಾರು 25 ಮಂದಿ ಸಾವನ್ನಪ್ಪಿದ್ದಾರೆ. 830ಕ್ಕೂ ಅಧಿಕ ಜನರಿಗೆ ಈ ವೈರಸ್ ತಗಲಿರುವ ಬಗ್ಗೆ ವರದಿಯಾಗಿದೆ. ಇತ್ತ ಚೀನಾ ಪ್ರವಾಸಕ್ಕೆ ತೆರೆಳಿದ್ದ ಮುಂಬೈನ ಇಬ್ಬರು ನಿವಾಸಿಗಳಿಗೆ ಈ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಇಬ್ಬರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಚೀನಾದ ಯುವತಿಯೋರ್ವಳು ಬಾವಲಿಗಳ ಸೂಪ್ ಕುಡಿಯುತ್ತಿರುವ ದೃಶ್ಯಗಳು ಸೆರೆಯಾಗಿದೆ. ಹೀಗಾಗಿ ಈ ಯುವತಿಯಿಂದಲೇ ಕೊರೊನಾ ವೈರಸ್ ಎಲ್ಲೆಡೆ ಹರಡಿದೆ ಎನ್ನಲಾಗುತ್ತಿದೆ.

ಸಸ್ತನಿಗಳ ವರ್ಗಕ್ಕೆ ಸೇರಿರುವ ಪ್ರಾಣಿಯಾದ ಬಾವಲಿ ಮತ್ತು ಅದರ ಸೂಪ್ ಸೇವನೆಯಿಂದ ಈ ಯುವತಿಯ ದೇಹದಲ್ಲಿ ಕೊರೊನಾ ವೈರಸ್ ಅಭಿವೃದ್ಧಿ ಆಗಿದೆ, ಆಕೆಯಿಂದಲೇ ಈ ವೈರಸ್ ಬೇರೆಯವರ ದೇಹಕ್ಕೆ ಹರಡಿದೆ ಎಂದು ವರದಿಯೊಂದು ತಿಳಿಸುತ್ತೆ ಎಂದು ಚೀನಿಯರು ಹೇಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‍ಗೆ 2019-ಎನ್‍ಸಿಓವಿ ಎಂದು ನಾಮಕರಣ ಮಾಡಿದೆ. ಸಂಶೋಧನೆಯ ಪ್ರಕಾರ, ಕೊರೊನಾ ವೈರಸ್ (2019-ಎನ್‍ಸಿಓವಿ)ನಿಂದ ಹರಡುವ ಮಾರಕ ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ಹಾವುಗಳು ಮತ್ತು ಬಾವಲಿಗಳು ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ವೈರಸ್ ಸೋಂಕು ತಗುಲಿದ ರೋಗಿಗಳು ಸಗಟು ಮಾರುಕಟ್ಟೆಯಲ್ಲಿ ವನ್ಯಜೀವಿಗಳ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಸಗಟು ಮಾರುಕಟ್ಟೆಯಲ್ಲಿ ಸಮುದ್ರದ ಆಹಾರ, ಕೋಳಿ, ಹಾವು, ಬಾವಲಿ ಮತ್ತು ಕೃಷಿಗೆ ಬಳಸುವ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿಂದಲೇ ರೋಗಿಗಳ ದೇಹಕ್ಕೆ ವೈರಸ್ ಸೇರಿಕೊಂಡಿದೆ ಎನ್ನಲಾಗಿದೆ.

ಇನ್ನೊಂದೆಡೆ ಕರೋನಾ ವೈರಸ್ ಚೀನಾದ ಲ್ಯಾಬ್‍ನಿಂದಲೇ ಸೋರಿಕೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿರುವ ಬಯೋಸೇಫ್ಟಿ ಲ್ಯಾಬ್‍ನಿಂದ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ 13 ನಗರಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇತ್ತ ಸೌದಿಯಲ್ಲಿರುವ ಕೇರಳ ಮೂಲದ ನರ್ಸ್ ಒಬ್ಬರಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಹೀಗಾಗಿ ಕರ್ನಾಟಕದಲ್ಲಿ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *