ಬೀಜಿಂಗ್: ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತರಲು ಚೀನಾ ಸರ್ಕಾರ ಮುಂದಾಗಿದೆ. ಪ್ರಸ್ತುತ 15 ದಿನಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದ್ದು, ಈಗ ಮತ್ತಷ್ಟು ಕಠಿಣ ಕಾನೂನು ತರಲು ಚೀನಾ ಸಂಸತ್ತು ಮುಂದಾಗಿದೆ.
ಸೋಮವಾರದಿಂದ ಅಧಿವೇಶನ ಆರಂಭಗೊಂಡಿದ್ದು, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ಸಿನ ಕಾನೂನು ಸದಸ್ಯರು ಈಗಾಗಲೇ ಕರಡು ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ.
ಅಧಿವೇಶನ ಆರಂಭ ಮತ್ತು ಕೊನೆಯಲ್ಲಿ, ಪ್ರಮಾಣವಚನ ಸಮಾರಂಭ, ಧ್ವಜ ದಿನಾಚರಣೆ, ಪ್ರಮುಖ ಆಚರಣೆ, ಪ್ರಶಸ್ತಿ ಸಮಾರಂಭ, ಪ್ರಮುಖ ರಾಜತಾಂತ್ರಿಕ ಸಂದರ್ಭ, ಕ್ರೀಡಾ ಕಾರ್ಯಕ್ರದಲ್ಲಿ ರಾಷ್ಟ್ರಗೀತೆ ಮೊಳಗಬೇಕು. ಅಂತ್ಯಸಂಸ್ಕಾರ, ಖಾಸಗಿ ಕಾರ್ಯಕ್ರಮ, ಸಾರ್ವಜನಿಕ ಜಾಗದಲ್ಲಿ ರಾಷ್ಟ್ರಗೀತೆಯನ್ನು ಹಿನ್ನೆಲೆ ಮ್ಯೂಸಿಕ್ ಆಗಿ ಬಳಸುವುದನ್ನು ನಿಷೇಧ ವಿಧಿಸಿರುವ ಅಂಶ ಕರಡು ಮಸೂದೆಯಲ್ಲಿದೆ.
ದೇಶಭಕ್ತಿಯನ್ನು ಬೆಳೆಸುವ ಉದ್ದೇಶದಿಂದಾಗಿ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಯ ಮಕ್ಕಳ ಪಠ್ಯದಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಇರಬೇಕು ಎಂದು ತಿಳಿಸಲಾಗಿದೆ.
ನಿಮ್ಮ ಅಭಿಪ್ರಾಯ ಏನು? ಭಾರತದಲ್ಲಿ ಚಲನ ಚಿತ್ರ ಮಂದಿರದಲ್ಲಿ ರಾಷ್ಟ್ರಗೀತೆ ಮೊಳಗುವ ಬಗ್ಗೆ ಪರ ವಿರೋಧ ಕೇಳಿ ಬಂದಿದೆ. ಈ ಮಧ್ಯೆ ರಾಷ್ಟ್ರಗೀತೆಗೆ ಅಗೌರವ ತೋರಿಸಿದ ವ್ಯಕ್ತಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಲು ಚೀನಾ ಮುಂದಾಗಿದ್ದು, ಈ ಕ್ರಮದ ಬಗ್ಗೆ ನಿಮ್ಮ ನಿಲುವು ಏನು? ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

Leave a Reply