ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು: ಚೀನಾ

ಬೀಜಿಂಗ್: ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು ಎಂದು ಚೀನಾದ ಮಾರುಕಟ್ಟೆ ತಜ್ಞೆ ಹೇಳಿದ್ದಾರೆ ಎಂಬುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಚೀನಾದ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಸಂಶೋಧಕಿ ಲಿಯು ಕ್ಸಿಯಾಕ್ಸ್ಯೂ ಚೀನಾದ ಕಮ್ಯೂನಿಸ್ಟ್ ಸರ್ಕಾರದ ಮುಖವಾಣಿ ಎಂದೇ ಬಿಂಬಿತವಾಗಿರುವ ಗ್ಲೋಬಲ್ ಟೈಮ್ಸ್ ಗೆ ಈ ಹೇಳಿಕೆ ನೀಡಿದ್ದಾರೆ.

ಚೀನಾದ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಮಾರುಕಟ್ಟೆ ಹೆಚ್ಚು ಪ್ರೌಢವಾಗಿದೆ. ವಿದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಚೀನಾದ ಷೇರು ಮಾರುಕಟ್ಟೆ ಸೂಕ್ಷ್ಮವಾಗಿದ್ದು ಹಣಕಾಸಿನ ಅಪಾಯ ಹೆಚ್ಚಿದೆ ಎಂದಿದ್ದಾರೆ.

ದಶಕಗಳ ಹಿಂದೆ ಭಾರತದಲ್ಲಿ ವ್ಯಾಪಾರದ ಕೊರತೆ ಇತ್ತು. ಈ ಕೊರತೆ ನೀಗಿಸಲು ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಬಹಳ ಹೋಮ್‍ವರ್ಕ್ ಮಾಡತೊಡಗಿತು. ಹೂಡಿಕೆದಾರರ ಆಸಕ್ತಿಯನ್ನು ರಕ್ಷಿಸಲು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಷೇರು ಮಾರುಕಟ್ಟೆಯನ್ನು ಭಾರತ ರೂಪಿಸಿತು ಎಂದು ವರದಿ ಮಾಡಿದೆ.

ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಸಮರ ಪರೋಕ್ಷವಾಗಿ ಭಾರತಕ್ಕೆ ನೆರವಾಗಲಿದೆ. ಏಷ್ಯಾದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಹೂಡಿಕೆದಾರರು ಚೀನಾವನ್ನು ಬಿಟ್ಟು ಭಾರತದ ಕಡೆ ಹೋಗುತ್ತಾರೆ ಎಂದು ಕ್ಸಿಯಾಕ್ಸ್ಯೂ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಆರ್ಥಿಕ ಬೆಳವಣಿಗೆಯ ಕುರಿತ ವಿಶ್ವಾಸ ವೃದ್ಧಿ, ದೇಶೀಯ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾದ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಮೊಟ್ಟ ಮೊದಲ ಬಾರಿಗೆ ಈ ವಾರ 38,000 ಅಂಕಗಳನ್ನು ಗಳಿಸಿತ್ತು.

Comments

Leave a Reply

Your email address will not be published. Required fields are marked *