ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲೇ ಉತ್ತಮ ಶಿಕ್ಷಣ ದೊರೆಯುತ್ತೆ: ಯದುವೀರ್

ಮಂಡ್ಯ: ಪ್ರಸಕ್ತ ದಿನಮಾನಗಳಲ್ಲಿ ಮಕ್ಕಳಿಗೆ ಶಿಕ್ಷಣ ಎನ್ನುವುದು ಬಹಳ ಮುಖ್ಯ. ಆದ್ದರಿಂದ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಶಿಕ್ಷಣವನ್ನು ಕೊಡಿಸಿ ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕರೆ ನೀಡಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದ ಮಾದರಿ ಸರ್ಕಾರಿ ಶಾಲೆಯನ್ನು ಉದ್ಘಾಟಿಸಿ ಮಾತಾನಾಡಿದ ಯದುವೀರ್ ಅವರು, ಮಕ್ಕಳಿಗೆ ಶಿಕ್ಷಣ ಎನ್ನುವುದು ಬಹಳ ಮುಖ್ಯವಾದದ್ದು. ಬದುಕನ್ನು ರೂಪಿಸಿಕೊಳ್ಳುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮಹರಿಸಬೇಕು. ಸದ್ಯ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲೇ ಉತ್ತಮವಾದ ಶಿಕ್ಷಣ ದೊರಕುತ್ತಿದೆ. ಆದಷ್ಟು ಸರ್ಕಾರಿ ಶಾಲೆಗಳ ಕಡೆಗೆ ಪೋಷಕರು ಹೆಚ್ಚು ಒತ್ತು ನೀಡಬೇಕು ಎಂದರು.

ಕಬ್ಬಾರೆ ಗ್ರಾಮದಲ್ಲಿ ಇದ್ದ ಸರ್ಕಾರಿ ಶಾಲೆಯೊಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು, ಶಾಲೆಯ ಹಳೆಯ ವಿದ್ಯಾರ್ಥಿಗಳು ಒಂದಾಗಿದ್ದರು. ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು ಬೆಂಗಳೂರಿನ ಎಂಟೆಕ್ ಖಾಸಗಿ ಕಂಪನಿಯನ್ನು ಹಳೆಯ ವಿದ್ಯಾರ್ಥಿಗಳು ಕೇಳಿಕೊಂಡಿದ್ದರು. ಇದ್ದಕ್ಕೆ ಸ್ಪಂದಿಸಿದ ಕಂಪನಿಯವರು ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

ಈ ಮಾದರಿ ಶಾಲೆಯನ್ನು ಇಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗಿಡಕ್ಕೆ ನೀರು ಹಾಕಿ ನಂತರ ದೀಪ ಬೆಳಗುವ ಮೂಲಕ ಶಾಲೆಯನ್ನು ಉದ್ಘಾಟನೆ ಮಾಡಿದರು. ಈ ವೇಳೆ ಮಂಡ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾಕರಾಣಿ, ಎಂಟೆಕ್ ಕಂಪನಿಯ ಮುಖ್ಯಸ್ಥರು, ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.

Comments

Leave a Reply

Your email address will not be published. Required fields are marked *