ಊಟ ಕಿತ್ಕೊಂಡ ಸರ್ಕಾರಕ್ಕೆ ಸೆಡ್ಡು – ತಾವೇ ಭತ್ತ ಬೆಳೆದ ಕಲ್ಲಡ್ಕ ಶಾಲೆ ಮಕ್ಕಳು

ಮಂಗಳೂರು: ಊಟ ಕಿತ್ತುಕೊಂಡ ಸರ್ಕಾರಕ್ಕೆ ಸವಾಲು ಹಾಕಿದ ಕಲ್ಲಡ್ಕ ಶಾಲೆಯ ಮಕ್ಕಳು ತಾವೇ ಭತ್ತ ಬೆಳೆದು ಮಧ್ಯಾಹ್ನದ ಬಿಸಿಯೂಟ ಸಿದ್ಧ ಮಾಡಿಕೊಂಡಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಶಾಲೆಯ ಮಕ್ಕಳಿಗೆ ಬರುತ್ತಿದ್ದ ಅನ್ನದಾನದ ಅನುದಾನವನ್ನು ಸರ್ಕಾರ ಕಿತ್ತುಕೊಂಡಿತ್ತು. ಹೀಗಾಗಿ ಆ ಶಾಲೆಯ ಮಕ್ಕಳು ತಮ್ಮ ಅನ್ನಕ್ಕೆ ಬೇಕಾದ ಅಕ್ಕಿಯನ್ನು ತಾವೇ ಬೆಳೆದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಸಿದ್ದು ಸರ್ಕಾರ ಶಾಲಾ ಮಕ್ಕಳ ಬಿಸಿಯೂಟವನ್ನು ಕಿತ್ತುಕೊಂಡಿತ್ತು. ಯಾರ ಮುಂದೆಯೂ ಕೈಯೊಡ್ಡದ ಕಲ್ಲಡ್ಕ ಶಾಲೆಯ ಮಕ್ಕಳು ಸ್ವಾವಲಂಬಿಗಳಾಗಿದ್ದು, ಶಾಲೆಗೆ ಸೇರಿದ ಸುಮಾರು ಏಳು ಎಕರೆ ಗದ್ದೆಯಲ್ಲಿ ತಾವೇ ಭತ್ತದ ಪೈರು ನಾಟಿ ಮಾಡಿದ್ದರು. ಈಗ ಭತ್ತ ಬೆಳೆದು ತಾವೇ ಕಟಾವು ಮಾಡಿ ಒಟ್ಟು ಮಾಡಿದ್ದಾರೆ. ಅದರಿಂದ ಸುಮಾರು 20 ಕ್ವಿಂಟಾಲ್‍ನಷ್ಟು ಭತ್ತ ಸಿಕ್ಕಿದೆ. ತಮ್ಮ ಅನ್ನಕ್ಕಾಗಿ ತಾವೇ ಅಕ್ಕಿಯನ್ನು ರೆಡಿ ಮಾಡಿಕೊಂಡು ಸರ್ಕಾರಕ್ಕೆ ಹಾಕಿದ್ದ ಸವಾಲಲ್ಲಿ ಗೆದ್ದು ತಿರುಗೇಟು ನೀಡಿದ್ದಾರೆ.

ಸರ್ಕಾರ ಅನ್ನ ಕಸಿದರೂ ನಾವೇ ನಮಗೆ ಬೇಕಾದ ಅನ್ನದ ದಾರಿಯನ್ನು ಹುಡುಕಿದ್ದೇವೆ ಎನ್ನುವ ಖುಷಿ ನಮ್ಮಲ್ಲಿದೆ. ಇನ್ನು ಭತ್ತದ ಹುಲ್ಲನ್ನ ಅಲ್ಲಿನ ದನಕರುಗಳಿಗೆ ಮೇವನ್ನಾಗಿ ಬಳಸಲಾಗುತ್ತಿದೆ ಎಂದು ವಿದ್ಯಾರ್ಥಿ ವರುಣ್ ಹೇಳಿದ್ದಾನೆ.

ಸರ್ಕಾರ ಮಾಡಿದ ಕೆಲಸವನ್ನು ಮಕ್ಕಳು ಸವಲಾಗಿ ಸ್ವೀಕರಿಸಿ ತಾವೇ ಭತ್ತವನ್ನು ಬೆಳೆದಿದ್ದಾರೆ. ಇದರಿಂದ ಮಕ್ಕಳಲ್ಲಿ ಸ್ವವಲಂಬನೆ ಬೆಳೆದಿದೆ ಎಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.

ಭತ್ತದ ಕೃಷಿಯನ್ನು ಮುಂದುವರೆಸಿಕೊಂಡು ಹೋಗಲು ಶಾಲೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಒಟ್ಟಿನಲ್ಲಿ ಮಕ್ಕಳ ಸ್ವಾವಲಂಬನೆ ಎಲ್ಲರಿಗೂ ಮಾದರಿಯಾಗಿದೆ.

Comments

Leave a Reply

Your email address will not be published. Required fields are marked *