ಕೊಡಗಿನ ಗ್ರಾಮೀಣ ಭಾಗದ ಮಕ್ಕಳಿಗೆ ವಿಚಿತ್ರ ಕಾಯಿಲೆ- ಪೋಷಕರಲ್ಲಿ ಅತಂಕ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಂದಿಗೂ ಕೊರೊನಾ ಪಾಸಿಟಿವ್ ಪ್ರಮಾಣ ಏರಿಳಿತ ಅಗುತ್ತಿದೆ. ಕೋವಿಡ್ ಸೋಂಕಿನಿಂದ ತತ್ತರಿಸಿದ ಜಿಲ್ಲೆಯಲ್ಲಿ ಈಗ ಚಿಕ್ಕ ಮಕ್ಕಳಿಗೆ ವಿಚಿತ್ರ ಕಾಯಿಲೆ ಬರಲಾರಂಭಿಸಿದೆ. ವಿಪರೀತ ಜ್ವರ, ಮೈಯೆಲ್ಲ ಕಜ್ಜಿ, ತುರಿಕೆ, ಆಗಾಗ್ಗೆ ವಾಂತಿಯಂತಹ ಲಕ್ಷಣಗಳಿರುವ ಕಾಯಿಲೆ ಜಿಲ್ಲೆಯ ಹಲವೆಡೆ ಕಾಣಿಸಿಕೊಂಡಿದೆ. ಹೀಗಾಗಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಿದರೂ ನೆಗೆಟಿವ್ ಬರುತ್ತಿದೆ. ಡೇಂಘೀ, ಚಿಕನ್ ಗುನ್ಯಾ ವರದಿ ಸಹ ನೆಗೆಟಿವ್. ಆದರೆ ಈ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಲವು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಗೆಯ ಲಕ್ಷಣಗಳಿರುವ ರೋಗಿಗಳು ಕಂಡು ಬರುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ಇಲ್ಲಿನ ಸುಮಾರು ಮಕ್ಕಳು ಮೈಸೂರಿನ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಕಾಯಿಲೆ ಸೊಳ್ಳೆಗಳಿಂದ ಹರಡುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್ ಮಾದರಿಯ ಅಕ್ಕಿ ಪತ್ತೆ- ಕಲಬೆರಕೆ ಅರೋಪ

ಇದಕ್ಕೆ ಸಾಕ್ಷಿಯಾಗಿ ಸೊಳ್ಳೆಗಳು ಹೆಚ್ಚು ಇರುವ ಪ್ರದೇಶಗಳಿಂದಲೇ ಜಾಸ್ತಿ ಪ್ರಕರಣಗಳು ವರದಿಯಾಗುತ್ತಿವೆ. ಒಂದು ವಾರಕ್ಕೂ ಹೆಚ್ಚು ಕಾಲ ಜ್ವರ, ಕಜ್ಜಿ, ತುರಿಕೆಯಿಂದ ಕಾಡುವ ಈ ರೋಗ ಸ್ವಲ್ಪ ಹೆಚ್ಚಾದಾಗ ವಾಂತಿಯೂ ಶುರುವಾಗುತ್ತದೆ. ಮಕ್ಕಳಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ ಬಳಿಕ ಗುಣಮುಖರಾಗುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 818 ಕೊರೊನಾ ಕೇಸ್- 21 ಸಾವು, 1,414 ಡಿಸ್ಚಾರ್ಜ್

ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಡೆಂಘೀ ಮಾದರಿಯ ಈ ಹೊಸ ರೋಗ ಇಂತಹ ಭಾಗಗಳಲ್ಲೇ ಕಂಡುಬರುತ್ತಿದೆ. ಈ ಎರಡೂ ಪ್ರದೇಶದ ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಸಂಪೂರ್ಣ ಕುಶಾಲನಗರ ತಾಲೂಕಿನಲ್ಲಿ ರೋಗ ಪೀಡಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುವ ಆತಂಕದ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಅರೋಗ್ಯಧಿಕಾರಿ ಡಾಕ್ಟರ್ ವೆಂಕಟೇಶ್, ಈ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ. ಚಿಕಿತ್ಸೆ ನೀಡಿರುವ ಮೈಸೂರಿನ ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿ ಈ ಸಂಬಂಧ ಮಾಹಿತಿ ಪಡೆಯಲಾಗುವುದು. ಕೆಲವೊಮ್ಮೆ ಖಾಸಗಿ ಆಸ್ಪತ್ರೆಗಳು ಸುಳ್ಳು ಹೇಳಿ ಭಯಪಡಿಸಿರುವ ಸಾಧ್ಯತೆಯೂ ಇರುತ್ತದೆ. ಈಗಾಗಲೇ ಮಾಹಿತಿ ಬಂದ ತಕ್ಷಣವೇ ಒಂದು ತಂಡ ರಚನೆ ಮಾಡಿ, ರೋಗ ಲಕ್ಷಣದ ಬಗ್ಗೆ ಮಾಹಿತಿ ಕಲೆ ಹಾಕಲು ಗ್ರಾಮೀಣ ಭಾಗಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *