ಮನೆಯ ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ- ಚಂದ್ರಗ್ರಹಣದಂದು ಶಿಶು ಬಲಿ?

ಹೈದರಾಬಾದ್: ಅಪರಿಚಿತ ಮಗುವಿನ ರುಂಡವೊಂದು ಮನೆಯ ಟೆರೇಸ್ ಮೇಲೆ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಚಿಲುಕಾ ನಗರದಲ್ಲಿ ನಡೆದಿದೆ. ಮಾಟ ಮಂತ್ರಕ್ಕಾಗಿ ಚಂದ್ರಗ್ರಹಣದಂದು ಮಗುವನ್ನ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಈ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಬಟ್ಟೆ ಒಣಗಿಸಲು ಟೆರೇಸ್ ಮೇಲೆ ಹೋದಾಗ ಮಗುವಿನ ರುಂಡ ನೋಡಿ ಕಿರುಚಿಕೊಂಡಿದ್ದಾರೆ. ಇದನ್ನ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು 2 ತಿಂಗಳದ್ದಾ ಅಥವಾ ಮೂರು ತಿಂಗಳದ್ದಾ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ.

ಮಹಿಳೆಯ ಅಳಿಯನಾದ ಕ್ಯಾಬ್ ಚಾಲಕ ರಾಜಶೇಖರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ನಾಯಿಗಳು ನೆರೆಮನೆಯ ಡಸ್ಟ್ ಬಿನ್ ಬಳಿ ಕೊಂಡೊಯ್ದ ನಂತರ ಆ ಮನೆಯವರಾದ ನರಹರಿ ಹಾಗೂ ರಂಜಿತ್ ಎಂಬಿಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರೂ ಆಗಾಗ ಮಾಟ ಮಂತ್ರಕ್ಕಾಗಿ ಪೂಜೆ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಟೆರೇಸ್‍ನಲ್ಲಿ ಯಾವುದೇ ರಕ್ತದ ಕಲೆಗಳು ಇರಲಿಲ್ಲ. ಹೀಗಾಗಿ ತಲೆಯನ್ನು ಮೊದಲೇ ಕಡಿದು ಅಲ್ಲಿ ಇಡಲಾಗಿದೆ ಎಂಬುದನ್ನ ಸೂಚಿಸಿದೆ. ಮಗುವಿನ ದೇಹಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಮಗುವಿನ ರುಂಡ ನೋಡಿ ಆತಂಕಕ್ಕೀಡಾದ ಮಹಿಳೆ ಬಾಲಲಕ್ಷ್ಮೀ, ಮಗು ಬಲಿ ಕೊಡಲು ನಮ್ಮ ಮನೆಯ ಟೆರೇಸನ್ನೇ ಯಾಕೆ ಆಯ್ದುಕೊಂಡರು ಎಂದು ಗಾಬರಿಯಾಗಿದ್ದು, ಕಣ್ಣೀರಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *