ಬದುಕಿರುವ ಕಂದಮ್ಮನನ್ನು ಸಾವನ್ನಪ್ಪಿದೆ ಎಂದ ಹಾಸನದ ವೈದ್ಯರು

ಚಿಕ್ಕಮಗಳೂರು: ಮೃತಪಟ್ಟಿದೆ ಎಂದು ಉಸಿರಾಡುತ್ತಿದ್ದ ಮಗುವನ್ನು ವೈದ್ಯರು ಪೋಷಕರಿಗೆ ಒಪ್ಪಿಸಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪದ ಹಳಿಯೂರಿನ ಲೋಕೇಶ್-ಸರೀತಾ ದಂಪತಿಯ ಮೂರು ತಿಂಗಳ ಮಗು ಆರವ್‍ನನ್ನು ಹುಷಾರಿಲ್ಲದ ಕಾರಣ ಮೂರು ದಿನಗಳ ಹಿಂದೆ ಹಾಸನದ ಮಣಿ ಆಸ್ಪತ್ರೆಗೆ ಕರೆತರಲಾಗಿತ್ತು.

ಚಿಕಿತ್ಸೆಗೆ ಸರಿಯಾಗಿ ಮಗು ಸ್ಪಂದಿಸುತ್ತಿರಲಿಲ್ಲ. ಮಗು ಸರಿಯಾಗಿ ಸ್ಪಂದಿಸದ ಕಾರಣ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ, ಮಗುವನ್ನು ಅವರ ಕೈಗೆ ನೀಡಿದ್ದಾರೆ. ಆದರೆ, ಹಾಸನದಿಂದ ಮೂಡಿಗೆರೆಗೆ ತರುವ ಮಾರ್ಗಮಧ್ಯೆ ಕಂದಮ್ಮ ಅತ್ತಿದೆ.

ತಕ್ಷಣವೇ ಪೋಷಕರು ಮಗುವನ್ನು ಮೂಡಿಗೆರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ನಂತರ ಮಗು ಹುಷಾರಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಆರವ್‍ನನ್ನು ಪೋಷಕರು ಈಗ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಣಿ ಆಸ್ಪತ್ರೆಯ ವೈದ್ಯರ ಎಡವಟ್ಟಿಗೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *