‘ಹೌದು ಹುಲಿಯಾ’ ಎಂದು ಸಿದ್ದರಾಮಯ್ಯರನ್ನ ಸ್ವಾಗತಿಸಿದ ಕಾಫಿನಾಡಿಗರು

ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ವೇದಿಕೆ ಮೇಲೆ ಕೂರಿಸಿ, ಸ್ವಾಗತ ಕೋರುವ ಮುನ್ನ ‘ಹೌದು ಹುಲಿಯಾ’ ಎನ್ನುವ ಮೂಲಕ ಚಿಕ್ಕಮಗಳೂರಿಗರು ಸ್ವಾಗತ ಕೋರಿದ್ದಾರೆ.

ಗುರುವಾರ ಜಿಲ್ಲೆಯ ತರೀಕೆರೆ ತಾಲೂಕಿನ ಚಿಕ್ಕೆರೆ ಸಮೀಪದ ಜಾಮೀಯಾ ಮಸೀದಿಯಲ್ಲಿ ನಡೆದ ಹಜ್ರತ್ ಸೈಯದ್ ಸಲಾಹುದ್ದಿನ್ ಷಾ ಖಾದ್ರಿ ಸಂಘಟನೆಯ ಸಂದಲ್ ಹಾಗೂ ಉರುಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರನ್ನು ‘ಹೌದು ಹುಲಿಯಾ’ ಎಂದು ಫೋಷಣೆ ಕೂಗುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಸಿದ್ದರಾಮಯ್ಯ ಕೂಡ ನಸು ನಕ್ಕಿದರು.

ಮಸೀದಿ ಆವರಣದಲ್ಲಿ ನಡೆದ ಧಾರ್ಮಿಕ ಸೌಹಾರ್ದ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು, ದೇಶ ಹಾಗೂ ಸಂವಿಧಾನ ಇಂದು ಅಪಾಯದಲ್ಲಿದೆ. ದೇಶವನ್ನ ಪ್ರೀತಿಸುವ ಪ್ರತಿಯೊಬ್ಬರು ಇವತ್ತು ದೇಶ ಹಾಗೂ ಸಂವಿಧಾನ ಉಳಿವಿಗೆ ಮುಂದಾಗಬೇಕು. ಅದಕ್ಕೆ ಜಾತಿ-ಧರ್ಮ ಅಡ್ಡ ಬರಬಾರದು ಎಂದರು.

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನವನ್ನ ಹತ್ತಿಕ್ಕುವ ಕೆಲಸ ಆಗುತ್ತಿದೆ. ಇತ್ತೀಚೆಗೆ ಸಿಎಎ ಕಾಯ್ದೆಯನ್ನ ಜಾರಿಗೆ ತಂದಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎಂಪಿಆರ್ ಈ ಮೂರು ಕಾಯ್ದೆಗಳು ಬಿಡಿಬಿಡಿಯಾದಂತ ಕಾಯ್ದೆಗಳಲ್ಲ. ಒಂದಕ್ಕೊಂದು ಸಂಬಂಧ ಇರುವಂತಹ ಕಾಯ್ದೆಗಳು. ಒಂದು ಧರ್ಮದ ಜನರನ್ನ ಗುರಿಯಾಗಿಟ್ಟುಕೊಂಡು ಈ ಕಾನೂನನ್ನ ಜಾರಿ ಮಾಡುವ ಮೂಲಕ ಈ ದೇಶದ ಮೂಲ ನಿವಾಸಿಗಳಿಗೂ ತೊಂದರೆಯಾಗ್ತಿದೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ತರೀಕೆರೆ ಮಾಜಿ ಶಾಸಕರಾದ ಜಿ.ಎಚ್ ಶ್ರೀನಿವಾಸ್, ಎಸ್.ಎಂ ನಾಗರಾಜು, ಟಿ.ಎಚ್ ಶಿವಶಂಕರಪ್ಪ, ಎಐಸಿಸಿ ಕಾರ್ಯದರ್ಶಿ ಸಂದೀಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *