ಬಾರ್ ಓಪನ್ ಆಗಿದೆ ಅಂತ ಓಡೋಡಿ ಬಂದು ಏನೂ ಸಿಗದೆ ವಾಪಸ್ಸಾದ್ರು!

ಚಿಕ್ಕಮಗಳೂರು: ಬಾರ್ ಓಪನ್ ಆಗಿದೆ ಎಂದು ಓಡೋಡಿ ಬಂದ ಮದ್ಯ ಪ್ರಿಯರು ಬಳಿಕ ನಿರಾಸೆಗೊಂಡ ಘಟನೆ ಕಡೂರು ತಾಲೂಕಿನ ಯಗಟಿ ಬಳಿಯ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.

ಜನ ಎಷ್ಟರ ಮಟ್ಟಿಗೆ ಎಣ್ಣೆ-ಎಣ್ಣೆ ಅಂತಿದ್ದಾರೆ ಅಂದ್ರೆ ಬೆಳಗೆದ್ದು ದೇವರ ಮುಖ ನೋಡ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಎಣ್ಣೆ ಅಂಗಡಿ ಓಪನ್ ಆಗುತ್ತಾ, ಸಿಎಂ ಏನಾದರೂ ಹೇಳ್ತಾರಾ ಅಂತ ಟಿವಿ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಯಗಟಿ ಬಳಿ ಓರ್ವ ಎಣ್ಣೆ ಅಂಗಡಿ ಓಪನ್ ಆಗಿದೆ ಎಂದು ಸ್ನೇಹಿತರಿಗೆ ಹೇಳಿದ್ದೇ ತಡ, ವಿಷಯ ಒಬ್ಬರಿಂದ ಒಬ್ಬರಿಗೆ ಹಬ್ಬಿ ಎದ್ನೋ-ಬಿದ್ನೋ ಅಂತ ಯಗಟಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಬೆಳ್ಳಂಬೆಳಗ್ಗೆಯೇ ಬಾರ್ ಮುಂದೆ ಜಮಾಯಿಸಿದ್ದರು.

ಸ್ಥಳಕ್ಕೆ ಬಂದ ಮದ್ಯಪ್ರಿಯರಿಗೆ ಪೊಲೀಸರು, ಅಯ್ಯೋ ಪುಣ್ಯಾತ್ಮರೆ ಬಾರ್ ಓಪನ್ ಆಗಿಲ್ಲ. ನಿನ್ನೆ ರಾತ್ರಿ ಬಾರ್ ಕಳ್ಳತನವಾಗಿದೆ. ಸ್ಥಳ ಪರಿಶೀಲನೆಗೆ ಬಂದಿದ್ದೇವೆ. ಮೇ 15ರವರೆಗೂ ಬಾರ್ ಕಡೆ ಬರಬೇಡಿ ಎಂದು ತಿಳಿ ಹೇಳಿ ವಾಪಸ್ ಕಳಿಸಿದ್ದಾರೆ.

ಎಣ್ಣೆ ಆಸೆಯಿಂದ ಬಂದ ಮದ್ಯಪ್ರಿಯರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗಿದ್ದಾರೆ. ಮೇ 3ರವರಗೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಲಾಕ್‍ಡೌನ್ ಅನ್ನು ಮತ್ತೆ ಮುಂದೂಡಿದರೆ ಮದ್ಯ ಸಿಗುವುದು ಡೌಟ್.

Comments

Leave a Reply

Your email address will not be published. Required fields are marked *