ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ

ಚಿಕ್ಕೋಡಿ(ಬೆಳಗಾವಿ): ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ.ವನ್ನು ಸಂಕೇಶ್ವರ ಕ್ರಾಸ್ ಚೆಕ್‍ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕಾರೊಂದರಲ್ಲಿ ಟ್ರಂಕ್ ಪತ್ತೆಯಾಗಿದೆ. ಅದನ್ನು ತೆರೆದು ನೋಡಿದಾಗ 30 ಲಕ್ಷ ರೂ. ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಹಣವು ಬ್ಯಾಂಕ್‍ವೊಂದಕ್ಕೆ ಸೇರಿದ್ದು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಸೂಕ್ತ ದಾಖಲಾತಿಗಳಿಲ್ಲದೆ ಇರುವುದರಿಂದ ಕಾರು ಮತ್ತು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತ ಕರ್ನಾಟಕ-ಆಂಧ್ರ ಗಡಿಭಾಗದ ಬಾಗೇಪಲ್ಲಿಯಲ್ಲಿ ಇಂದು ಸೂಕ್ತ ದಾಖಲೆಗಳಿಲ್ಲದ 1 ಕೋಟಿ 75 ಲಕ್ಷ ರೂ. ಮೌಲ್ಯದ ಹಣ ಪತ್ತೆಯಾಗಿದೆ. ಬಾಗೇಪಲ್ಲಿಯ ಸುಂಕ ವಸೂಲಾತಿ ಕೇಂದ್ರದ ವ್ಯವಸ್ಥಾಪಕ ಸುಬ್ಬಾರೆಡ್ಡಿ ಅವರ ಕಚೇರಿಯಲ್ಲಿ ನಗದು ಪತ್ತೆಯಾಗಿದ್ದು, ಈ ಸಂಬಂಧ ಮಾಹಿತಿ ತಿಳಿದ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಹಣ ವಶಕ್ಕೆ ಪಡೆದಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ಅಕ್ರಮಗಳಿಗೆ ಬಳಸಲು ದೊಡ್ಡ ಮೊತ್ತದ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *