ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಸಾವಿರ ಮಂದಿ ಕಾಫಿನಾಡಿಗರಿಂದ ಪತ್ರ

ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆ ಹಾಗೂ ಬಫರ್ ಝೋನ್‍ನಿಂದ ನಮ್ಮ ಬದುಕು ಬೀದಿಗೆ ಬೀಳುವಂತಾಗಿದೆ. ಯೋಜನೆ ಜಾರಿಗೆ ಬರುವ ಮುನ್ನ ನಮಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ 10ಕ್ಕೂ ಹೆಚ್ಚು ಹಳ್ಳಿಯ ಜನ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ಗೆ ಪತ್ರ ಬರೆದಿದ್ದಾರೆ.

ಎನ್.ಆರ್.ಪುರ ತಾಲೂಕಿನ ಸಾಲೂರು, ಹೊನ್ನಂಗಿ, ಬೆಳ್ಳಂಗಿ, ಅಳೇಹಳ್ಳಿ, ಆಡುವಳ್ಳಿ, ಕೊಳಲೆ, ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಸೇರಿದಂತೆ ವಿವಿಧ ಹಳ್ಳಿಗಳ ಸಾವಿರಕ್ಕೂ ಹೆಚ್ಚು ಜನ ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಪತ್ರ ಬರೆದಿದ್ದಾರೆ. ಈ ಹಿಂದೆ ಕೂಡ ಸರ್ಕಾರ ವಿವಿಧ ಕಾರಣಗಳಿಂದ ಜನರನ್ನ ಒಕ್ಕಲೆಬ್ಬಿಸಿತ್ತು. ಈ ಹಿಂದೆ ಸರ್ಕಾರ ಒಕ್ಕಲೆಬ್ಬಿಸಿದ್ದ ವೇಳೆ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದೇವೆ. ಇಲ್ಲಿಂದ ಈಗ ಮತ್ತೆ ಒಕ್ಕಲೆಬ್ಬಿಸಿದರೆ ಎಲ್ಲಿಗೆ ಹೋಗೋದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಭದ್ರಾ ಹುಲಿ ಯೋಜನೆ ಹಾಗೂ ಬಫರ್ ಝೋನ್ ನೂರಾರು ಹಳ್ಳಿಯ ಜನರಿಗೆ ಮರಣಶಾಸನವಾಗಿದೆ. ಹಾಗಾಗಿ ಯೋಜನೆ ಜಾರಿಗೆ ಬರುವ ಮುನ್ನ ದಯಾಮರಣಕ್ಕೆ ನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಈಗ ಒಂದು ಸಾವಿರ ಜನ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಐದು ಸಾವಿರ ಜನ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಈ ಹಿಂದೆ ಕೂಡ ಇದೇ ಯೋಜನೆಯನ್ನ ವಿರೋಧಿಸಿ ಸಾವಿರಾರು ರೈತರು ಎನ್.ಆರ್.ಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಜಡ್ಜ್ ಭೇಟಿ ವೇಳೆ ಬಾಗಿಲು ಮುಚ್ಚಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್

ಗ್ರಾಮ ಪಂಚಾಯಿತಿ ಚುನಾವಣೆಯನ್ನ ಬಹಿಷ್ಕರಿಸಿದ್ದರು. ಈ ಯೋಜನೆ ಜಾರಿಗೆ ಬಂದರೆ 125ಕ್ಕೂ ಹೆಚ್ಚು ಹಳ್ಳಿಗಳಿಗೆ ತೊಂದರೆಯಾಗಲಿದೆ. ಶತಮಾನಗಳ ಬದುಕು ಬೀದಿಗೆ ಬರಲಿದೆ. ಹಾಗಾಗಿ ಜನ ಯೋಜನೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕೇಂದ್ರ-ರಾಜ್ಯ ಸರ್ಕಾರದ ಗಮನ ಸೆಳೆಯಲು ಎಲ್ಲಾ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಯೋಜನೆ ವಿರುದ್ಧ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *