ದಶಕದ ಹಿಂದೆ ಕಳೆದೋಗಿದ್ದ ನದಿ ಮೂಲ ಹುಡುಕಿದ ಯುವಕರು

ಚಿಕ್ಕಮಗಳೂರು: ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆಯಾಗಿದ್ದ ನದಿ ಮೂಲವನ್ನು ಸ್ಥಳೀಯ ಯುವಕರೇ ಹುಡುಕಿಕೊಂಡು ಕೆರೆ ತುಂಬಿಸಿಕೊಳ್ಳಲು ಮುಂದಾಗಿರುವ ಘಟನೆ ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.

ಸಿದ್ದಪ್ಪನ ಬೆಟ್ಟದಿಂದ ಹರಿದು ಬರುತ್ತಿದ್ದ ನದಿ ಮೂಲ ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಮರಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದೆ. ಗಿಡಘಂಟೆಗಳಿಂದ ತುಂಬಿ ಪಾಳುಬಿದ್ದಿದ್ದ ಕೆರೆಯನ್ನು ಸ್ವಚ್ಛ ಮಾಡಿ, ನೀರು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

ತಾಲೂಕಿನ ಹಿರೇಗೌಜ ಗ್ರಾಮವಂದ್ರೆ ಭೀಕರ ಬರದ ತವರು. ಜನ, ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸುತ್ತಿದ್ದರು. ನೀರಿನ ಸೌಲಭ್ಯ ನೀಡಬೇಕಿದ್ದ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳ ನಡೆ ಹಾಗೂ ನುಡಿ ಬಾಯಾರಿಕೆಯ ದಾಹವನ್ನು ನೀಗಿಸುತ್ತಿರಲಿಲ್ಲ. 250 ರಿಂದ 300 ಮನೆಗಳಿದ್ದ ಗ್ರಾಮಕ್ಕೆ ವಾರಕ್ಕೆ ನಾಲ್ಕೈದು ಟ್ಯಾಂಕರ್ ನೀರು ಮಾತ್ರ ಪೂರೈಕೆ ಮಾಡಲಾಗುತ್ತಿತ್ತು.

ಬೈಕಲ್ಲಿ ನೀರು ತರ್ತಿದ್ದರು: ಪಂಚಾಯಿತಿಯಿಂದ ಪೂರೈಕೆಯಾಗುವ ನೀರು ದಿನನಿತ್ಯದ ಬಳಕೆ ಕಡಿಮೆಯಾಗುತ್ತಿದ್ದ ಕಾರಣ, ಹೆಚ್ಚುವರಿಯಾಗಿ ವಾರಗಟ್ಟಲೇ ಡ್ರಮ್ಮಿನಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು. ಗ್ರಾಮದ ಪುರುಷರು ಬೈಕಿನಲ್ಲಿ ತೆರಳಿ ನೀರು ತರುತ್ತಿದ್ದರು. ಮಹಿಳೆಯರು ಕೂಡ ಸುತ್ತಮುತ್ತಲಿನ ತೋಟಗಳಿಂದ ನೀರನ್ನು ಹೊತ್ತು ತರುತ್ತಿದ್ದರು.

ಸಪ್ತ ನದಿಗಳ ನಾಡು ಎಂದು ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಿಗೆ ಬರ ಎಂದರೇ ಯಾರೂ ನಂಬಲ್ಲ. ಆದರೆ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರೋ ಹಿರೇಗೌಜ ಗ್ರಾಮದಲ್ಲಿ ನೀರಿನ ಬವಣೆ ಹೇಳತೀರದ್ದಾಗಿತ್ತು. ಜನ ಕೂಲಿ ಮಾಡಿ ನೀರನ್ನು ಕುಡಿಯುತ್ತಿದ್ರು. ಟ್ಯಾಂಕರ್ ನೀರಿಗೆ ನಿತ್ಯ 100 ರಿಂದ 200 ರೂ. ನೀರು ಖರೀದಿ ಮಾಡುತ್ತಿದ್ದರು. ವಿದ್ಯುತ್ ಸಮಸ್ಯೆಯಿಂದ ಟ್ಯಾಂಕರ್ ನೀರು ಕೂಡ ಕಷ್ಟಸಾಧ್ಯವಾಗಿತ್ತು.

ಗ್ರಾಮದ ಮನೆಗೆ ಬೀಗವೇ ಹಾಕಲ್ಲ: ಹಿರೇಗೌಜ ಗ್ರಾಮದಲ್ಲಿ ಎಲ್ಲರೂ ಕೆಲಸಕ್ಕೆ ಹೋದರೂ ಯಾವ ಮನೆಗೂ ಬೀಗ ಹಾಕುತ್ತಿರಲಿಲ್ಲ. ಕಾರಣ ಪಂಚಾಯತಿ ಅವರು ಯಾವ ಸಂದರ್ಭದಲ್ಲಿಯಾದರೂ ನೀರನ್ನು ಬಿಡುತ್ತಿದ್ದರು. ಕೆಲ ಸಮಯ ದೊರೆಯುವ ನೀರನ್ನು ಸಂಗ್ರಹಿಸಲು ಸದಾ ಮನೆಯಲ್ಲಿ ಒಬ್ಬರು ಇರುತ್ತಿದ್ದರು. ಟ್ಯಾಂಕರ್ ಬಂದಾಗ ನೀರನ್ನು ತುಂಬಿಕೊಳ್ಳೋದಕ್ಕೆ ಮನೆಯಲ್ಲಿದ್ದವರು ಕಾಯುತ್ತಿದ್ದರು.

ಕಳೆದ ಕೆಲ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರು ಸಮಸ್ಯೆ ಬಗೆಹರಿಸಿಕೊಳ್ಳಲು ಚಿಂತನೆ ನಡೆಸಿದ್ದರು. ಹಿಂದೆ ತಮ್ಮ ಊರಿನ ಕೆರೆಗೆ ಬರುತ್ತಿದ್ದ ನೀರಿನ ಮೂಲವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಸದ್ಯ ಕೆರೆಗೆ ನೀರು ಬರುತ್ತಿದ್ದ ನದಿಯ ಮೂಲವನ್ನು ಮತ್ತೆ ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಆ ಮೂಲಕ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

ನೀರಿನ ಮೂಲ ಪತ್ತೆ ಮಾಡಲು ಹೊಯ್ಸಳ ಅಡ್ವೆಂಚರಸ್ ಕ್ಲಬ್ ಆಯೋಜಿಸಿದ್ದ ಚಾರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ ಸಹಕಾರದೊಂದಿಗೆ ವನ್ಯಜೀವ ಛಾಯಾಗ್ರಾಹಕ ಹಿರೇಗೌಜ ಶಿವು ನೇತೃತ್ವದಲ್ಲಿ ಗ್ರಾಮದ 35 ಯುವಕರು ಕಾಡುಮೇಡುಗಳಲ್ಲಿ ಅಲೆದು ಊಟ-ತಿಂಡಿ, ನೀರನ್ನು ಹೊತ್ತು ಸಂಚರಿಸಿದ್ದರು. ಈ ವೇಳೆ ನದಿಯ ಮೂಲವನ್ನು ಯುವಕರು ಪತ್ತೆ ಮಾಡಿದ್ದಾರೆ. ಗ್ರಾಮದ ಯುವಕರ ಈ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *