ತೆಪ್ಪದಲ್ಲೇ ರೋಗಿಯನ್ನು ನದಿ ದಾಟಿಸಿದ ಸ್ಥಳೀಯರು- ಚಿಕ್ಕಮಗ್ಳೂರಲ್ಲಿ ಮನಕಲಕುವ ಘಟನೆ

ಚಿಕ್ಕಮಗಳೂರು: ತೆಪ್ಪದಲ್ಲಿ ರೋಗಿಯನ್ನು ಕುರ್ಚಿಯಲ್ಲಿ ಕೂರಿಸಿಕೊಂಡು ಸ್ಥಳೀಯರು ಭದ್ರಾ ನದಿ ದಾಟಿಸಿದ ಮನಕಲಕುವ ಘಟನೆಯೊಂದು ಚಿಕ್ಕಮಗಳೂರಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಹಿರೆಕೂಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರುದ್ರಯ್ಯ ಅವರು ಉಬ್ಬಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ತೆಪ್ಪದ ಮೂಲಕ ಕಳುಹಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಮಂಗಳೂರಿಗೆ ಕರೆದೊಯ್ದಿದ್ದಾರೆ.

ಕೆಲ ತಿಂಗಳ ಹಿಂದೆ ಮೃತದೇಹವನ್ನು ಕೂಡ ಇದೇ ರೀತಿ ಸಾಗಿಸಿದ್ದರು. ಇಲ್ಲಿನ ಜನರು ಮೂರ್ನಾಲ್ಕು ದಶಕಗಳಿಂದ ಇದೇ ರೀತಿ ಬದುಕುತ್ತಿದ್ದಾರೆ. ತೆಪ್ಪ ಇಲ್ಲದಿದ್ದರೆ ಇವರಿಗೇ ಬದುಕೇ ಇಲ್ಲ. ಮಳೆಗಾಲದಲ್ಲಿ ಮಕ್ಕಳು ವಾರಗಟ್ಟಲೆ ಶಾಲೆಗೆ ಹೋಗುವುದಿಲ್ಲ. ಮನೆಗೆ ಒಂದು ಬೆಂಕಿ ಪೊಟ್ಟಣ ಬೇಕಂದ್ರೂ ನದಿ ದಾಟಿಯೇ ಬರಬೇಕು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಸ್ಥಳಕ್ಕೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿದ್ದು, ರಸ್ತೆ ಅಥವಾ ತೂಗು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಶಾಸಕರ ಭರವಸೆ, ಭರವಸೆಯಾಗಿಯೇ ಉಳಿದಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸಾಕಷ್ಟು ಮನವಿ ಕೂಡ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರು ಬಡಜನರ ಮನವಿಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Comments

Leave a Reply

Your email address will not be published. Required fields are marked *