ಮಗನ ಪ್ರಿಯತಮೆ ಮೇಲೆ ತಂದೆ ಅತ್ಯಾಚಾರ

ಚಿಕ್ಕಮಗಳೂರು: ಮಗನ ಪ್ರಿಯತಮೆ ಮೇಲೆ ಅಪ್ಪನೇ ಅತ್ಯಾಚಾರ ಮಾಡಿದ್ದು, ಇಡೀ ಮನುಕುಲವೇ ತಲೆ ತಗ್ಗಿಸುವಂತಹ ವಿಚಿತ್ರ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತ ಬಾಲಕಿ 10ನೇ ತರಗತಿ ಓದುತ್ತಿದ್ದು, ಆರೋಪಿಯನ್ನು ಸ್ಥಳೀಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಓದುತ್ತಿದ್ದಳು. ದೀಪಾವಳಿ ಹಬ್ಬಕ್ಕೆ ಅಮ್ಮನ ಮನೆಗೆ ಬಂದವಳು ಮರುದಿನ ಶಾಲೆ ಮುಗಿಸಿ ಅತ್ತೆ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಳು.

ಇತ್ತ ಅದೇ ದಿನ ಸಂಜೆ 6 ಗಂಟೆಗೆ ಆಕೆ ಬಂದಿಲ್ಲ ಎಂದು ಸಂಬಂಧಿಕರು ಬಾಲಕಿ ತಾಯಿಗೆ ಫೋನ್ ಮಾಡಿದ್ದರು. ತಾಯಿ ವಿಚಾರಿಸಿದಾಗ ಬಾಲಕಿ ಶಾಲೆಗೆ ಹೋಗದೇ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಯುವಕನ ಮನೆಗೆ ಹೋಗಿರುವುದಾಗಿ ತಾಯಿಗೆ ಗೊತ್ತಾಗಿದೆ. ಬಳಿಕ ಆಕೆಯನ್ನ ತಾಯಿ ಮನೆಗೆ ಕರೆತಂದಿದ್ದಾಳೆ. ಮನೆಗೆ ಬಂದು ವಿಚಾರಿಸಿದಾಗ ಬಾಲಕಿ ನಾನು ಎರಡು ವರ್ಷದಿಂದ ಪ್ರೀತಿಸುತ್ತಿದ್ದವನ ಮನೆಗೆ ಹೋಗಿದ್ದೆ. ಆತ ಮನೆಯಲ್ಲಿ ಇರಲಿಲ್ಲ. ಫೋನ್ ಮಾಡಿದರೂ ಸಂಪರ್ಕ ಸಿಗಲಿಲ್ಲ. ಮನೆಯಲ್ಲಿ ಆತನ ತಂದೆ ಇದ್ದರು. ಅವರು ನನಗೆ ಇಲ್ಲಿಯೇ ಇರು ಮಗ ನಾಳೆ ಬರುತ್ತಾನೆ ಎಂದು ಬಲವಂತವಾಗಿ ಉಳಿಸಿಕೊಂಡರು. ಹೀಗಾಗಿ ಆ ದಿನ ಅವರ ಮನೆಯಲ್ಲೇ ಊಟ ಮಾಡಿ ಪ್ರತ್ಯೇಕವಾಗಿ ಮಲಗಿದ್ದೆ. ಆಗ ಅವರು ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ.

ಮಗಳು ಘಟನೆ ವಿವರಿಸುತ್ತಿದ್ದಂತೆಯೇ ಬಾಲಕಿ ತಾಯಿ ಆರೋಪಿ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಅಪ್ಪು ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ: ರಾಧಿಕಾ ಪಂಡಿತ್

Comments

Leave a Reply

Your email address will not be published. Required fields are marked *