ಜಮ್ಮು & ಕಾಶ್ಮೀರ: ಜಾಕ್ ಸ್ಲಿಪ್ ಆಗಿ ಗಾಯಗೊಂಡು ಕೋಮಾದಲ್ಲಿದ್ದ ಕಾಫಿನಾಡಿನ ಯೋಧ ಸಾವು

ಚಿಕ್ಕಮಗಳೂರು: ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರವಾಗಿ ನಾಲ್ಕು ದಿನದಿಂದ ಕೋಮಾದಲ್ಲಿದ್ದ ಜಿಲ್ಲೆಯ ಕಡೂರು ತಾಲೂಕಿನ ಬಿಳವಾಳ ಗ್ರಾಮದ ಯೋಧ ಜಮ್ಮುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತ ಯೋಧನನ್ನು 45 ವರ್ಷದ ಬಿ.ಕೆ.ಶೇಷಪ್ಪ ಎಂದು ಗುರುತಿಸಲಾಗಿದೆ. ಮೂಲತಃ ಕಡೂರು ತಾಲೂಕಿನ ಶೇಷಪ್ಪ ಕಳೆದ 20 ವರ್ಷಗಳಿಂದ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್)ಯಲ್ಲಿ ಮ್ಯಾಕನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ

ಶೇಷಪ್ಪ ನಾಲ್ಕು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗ ವಾಹನ ರಿಪೇರಿ ಮಾಡುವ ವೇಳೆ ಜಾಕ್ ಸ್ಲಿಪ್ ಆಗಿ ವಾಹನ ಮೇಲೆ ಬಿದ್ದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿ ಕೋಮಾಗೆ ಜಾರಿದ್ದರು. ಅವರಿಗೆ ವೈಷ್ಣೋದೇವಿ ಬಳಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ ನಾಲ್ಕು ದಿನದಿಂದ ಕೋಮದಲ್ಲಿದ್ದ ಶೇಷಪ್ಪ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಿರುತೆರೆ ಕ್ರಿಕೆಟ್ ಗುಂಗು ಡಿಸೆಂಬರ್ ಎರಡನೇ ವಾರದಿಂದ TCL ಕಿಕ್ ಸ್ಟಾರ್ಟ್

ಶೇಷಪ್ಪ ಅವರಿಗೆ ಅನಾಹುತವಾದ ವಿಷಯ ತಿಳಿದ ಕೂಡಲೇ ಬಿಳವಾಲದಿಂದ ಅವರ ಹಿರಿಯ ಸಹೋದರ ಪ್ರಕಾಶ್ ಜಮ್ಮುವಿಗೆ ತೆರಳಿದ್ದರು. ಶೇಷಪ್ಪ ಅವರ ಚೇತರಿಕೆಗಾಗಿ ಗ್ರಾಮಸ್ಥರು ಹಾಗೂ ಸ್ನೇಹಿತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು. ಯೋಧನ ನಿಧನದ ಸುದ್ದಿಯಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಶೇಷಪ್ಪ ಅವರ ಪಾರ್ಥಿವ ಶರೀರ ಭಾನುವಾರ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಿಂದ ಸಂಜೆ ವೇಳೆಗೆ ಸ್ವಗ್ರಾಮ ಬಿಳವಾಲಕ್ಕೆ ಆಗಮಿಸುವ ನಿರೀಕ್ಷೆ ಇದೆ. ಬಿಳವಾಲದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಕಡೂರು ತಾಲ್ಲೂಕಿನ ಬಿಳವಾಲ ಗ್ರಾಮದ ಕೇಶವಪ್ಪ ಮತ್ತು ಮಾಳಮ್ಮ ದಂಪತಿ 2ನೇ ಮಗ ಶೇಷಪ್ಪ. ಅವರಿಗೆ ಪತ್ನಿ ಮತ್ತು ಎರಡು ಮಕ್ಕಳು ಇದ್ದಾರೆ.

Comments

Leave a Reply

Your email address will not be published. Required fields are marked *