ನಾನು ನೇರ 5ನೇ ಕ್ಲಾಸ್‍ಗೆ ಹೋದವ: ಸಿದ್ದರಾಮಯ್ಯ

ಚಿಕ್ಕಮಗಳೂರು: ನಾನು ನೇರವಾಗಿ ಐದನೇ ತರಗತಿಗೆ ಸೇರಿಕೊಂಡವನು. ನನಗೆ ನನ್ನ ಡೇಟ್ ಆಫ್ ಬರ್ತ್ ಗೊತ್ತಿಲ್ಲ. ಆ ಮೇಷ್ಟ್ರು ಬರೆದುಕೊಟ್ಟಿದ್ದರು ಅದನ್ನೇ ನಾನು ಹುಟ್ಟಿದ ದಿನ ಎಂದು ಹೇಳಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆದ ಸಿಎಎ ಹಾಗೂ ಎನ್.ಆರ್.ಸಿ ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧದ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮಪ್ಪ ಐದನೇ ತರಗತಿಗೆ ಸೇರಿಸಿದರು. ಆ ರಾಜಪ್ಪ ಮೇಷ್ಟರು ಪಾಪ, ಅವರು ನನ್ನನ್ನ ಅಡ್ಮಿಟ್ ಮಾಡಿಕೊಳ್ಳದಿದ್ದರೆ ನಾನು ಲಾಯರ್ ಆಗುತ್ತಿರಲಿಲ್ಲ. ಇಲ್ಲಿ ಭಾಷಣನೂ ಮಾಡುತ್ತಿರಲಿಲ್ಲ. ಮುಖ್ಯಮಂತ್ರಿ ಆಗಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ ಎಂದರು.

ಇದೇ ವೇಳೆ, ನಾನು ಮನೆಯಲ್ಲೇ ಹುಟ್ಟಿದ್ದು. ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ನಮ್ಮಪ್ಪ ಅವ್ವನಿಗೆ ನನ್ನ ಡೇಟ್ ಆಫ್ ಬರ್ತ್ ಹೇಗೆ ಗೊತ್ತು. ನನ್ನ ಕೇಳಿದರೆ ಅಪ್ಪ-ಅವ್ವನದ್ದು ಏನ್ ಹೇಳಲಿ. ನಂದೇ ಬರಲ್ಲ. ಅವರ ಡೇಟ್ ಆಫ್ ಬರ್ಥ್ ಎಲ್ಲಿಂದ ಹೇಳಲಿ. ಹಾಗಾದರೆ ನನ್ನನ್ನ ಡೌಟ್‍ಫುಲ್ ಎಂದು ಹೇಳುತ್ತೀರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ರಚನೆ ಬಗ್ಗೆ ಹುಟ್ಟಿಕೊಂಡಿರುವ ವಿವಾದದ ಬಗ್ಗೆ ಮಾತನಾಡಿ, ಬಿಜೆಪಿ ಹಾಗೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತೀಯ ಜನತಾ ಪಾರ್ಟಿಯವರೇ, ಸಂವಿಧಾನ ತಿರುಚಲು ಹೊರಟ್ಟಿದ್ದೀರಲ್ಲ ನಿಮಗೆ ನಾಚಿಕೆ ಆಗಲ್ವಾ? ಮಾತೆತ್ತಿದರೆ ಭಾರತ ಮಾತೆ ಅಂತೀರಾ. ಭಾರತ ಮಾತೆ ಇದೇನಾ ಹೇಳಿಕೊಟ್ಟಿರೋದು. ಇನ್ಮುಂದೆ ಅವರಿಗಿಂತ ಜೋರಾಗಿ ಭಾರತ ಮಾತೆ ಎಂದು ನಾವು-ನೀವು ಹೇಳೋಣ ಎಂದು ನೆರೆದಿದ್ದವರಿಗೆ ಸಲಹೆ ನೀಡಿದರು. ಭಾರತ ಮಾತೆ ಅನ್ನೋದು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿದ್ದೇವಾ ಎಂದು ವ್ಯಂಗ್ಯವಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವತ್ತೇ ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಈ ಸಂವಿಧಾನ ಫೇಲಾದರೆ ಅದು ನೇಚರ್ ಯಿಂದ ಆಗುವುದಿಲ್ಲ. ಸಂವಿಧಾನ ಫೇಲಾದರೆ ಈ ದೇಶದ ಮತಾಂದರಿಂದ ಫೇಲಾಗುತ್ತೆ ಎಂದು ಹೇಳಿದ್ದಾರೆ. ಸಿಎಎ ಹಾಗೂ ಎನ್.ಆರ್.ಸಿಯ ಯಾವ ಕಾನೂನುಗಳನ್ನು ಈ ದೇಶದಲ್ಲಿ ಆಚರಣೆ ಮಾಡಲು ಸಾಧ್ಯವಿಲ್ಲ ಎಂದು ಸಿದ್ದು ಗುಡುಗಿದರು.

Comments

Leave a Reply

Your email address will not be published. Required fields are marked *