ಕಡೂರು ಕೊಲೆ ಪ್ರಕರಣ- ಒಡವೆಗಳನ್ನು ವಶಪಡಿಸಿಕೊಂಡ ಪೊಲೀಸರು

ಚಿಕ್ಕಮಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜಿಲ್ಲೆಯ ಕಡೂರಿನ ಕೊಲೆ ಹಾಗೂ ಸರಣಿ ಆತ್ಮಹತ್ಯೆಯ ಕೇಂದ್ರಬಿಂದು ದಂತ ವೈದ್ಯ ರೇವಂತ್ ಪತ್ನಿ ಕೊಲೆ ಪ್ರಕರಣದಲ್ಲಿ ಕಳುವಾಗಿದ್ದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿರುವುದಾಗಿ ಕಡೂರು ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ತಿಳಿಸಿದರು.

ಕಡೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಹರ್ಷಿತಾಳೊಂದಿಗೆ ಇದ್ದ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಫೆಬ್ರವರಿ 17ರಂದು ಹರಿತವಾದ ಚಾಕುವಿನಿಂದ ಪತಿ ರೇವಂತ್ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದರು. ಇದನ್ನು ಮುಚ್ಚಿ ಹಾಕಲು ನಾಟಕ ಮಾಡಿ ಕೊನೆಗೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ವೇಳೆ ಪೊಲೀಸರ ದಾರಿ ತಪ್ಪಿಸಲು ಕಳ್ಳತನದ ನಾಟಕ ಮಾಡಿ, ಮನೆಯಲ್ಲಿದ್ದ ಒಡವೆಗಳನ್ನ ತಾನೇ ಕದ್ದು ಬೀರೂರಿನಿಂದ ಕೊರಿಯರ್ ಮೂಲಕ ತನ್ನ ಪ್ರೇಯಸಿ ಹರ್ಷಿತಾಗೆ ಕಳುಹಿಸಲಾಗಿತ್ತು. ಆ ಆಭರಣಗಳನ್ನ ತನಿಖಾ ತಂಡ ವಶಪಡಿಸಿಕೊಂಡಿದೆ. ಇದರಿಂದ ಕಡೂರಿನ ಜನತೆಯಲ್ಲಿ ಮೂಡಿದ್ದ ಆತಂಕ ದೂರವಾಗಿದೆ, ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿಸಲಿದ್ದೇವೆ ಎಂದರು. ಇದನ್ನು ಓದಿ: ಅವಳಿಗೆ ಗಂಡ ಬೇಡವಾಗಿದ್ದ, ಇವನಿಗೆ ಹೆಂಡ್ತಿ ಬೇಡವಾಗಿದ್ಳು- ಇಬ್ಬರು ಸೇರಲು ಪತ್ನಿಯನ್ನ ಕೊಂದ ಡಾಕ್ಟರ್

ಎಸ್‍ಪಿ ಹರೀಶ್ ಪಾಂಡೆ, ಎಎಸ್‍ಪಿ ಶೃತಿ ಮಾರ್ಗದರ್ಶನದಲ್ಲಿ ರಚನೆಯಾದ ಡಿ.ಎಸ್.ಪಿ ರೇಣುಕಾ ಪ್ರಸಾದ್ ನೇತೃತ್ವದ ತಂಡದಿಂದ ತನಿಖೆ ನಡೆದಿದೆ. ಪ್ರಕರಣವನ್ನು ಭೇದಿಸುವಲ್ಲಿ ಕಡೂರಿನ ಉಪ ನಿರೀಕ್ಷಕರಾದ ಎನ್.ಸಿ. ವಿಶ್ವನಾಥ್, ಬೀರೂರಿನ ರಾಜಶೇಖರ್, ಸಖರಾಯಪಟ್ಟಣ ಪಿಎಸ್‍ಐ ಮೌನೇಶ್, ಜಿಲ್ಲಾ ಪೊಲೀಸ್ ವೈಜ್ಞಾನಿಕ ತನಿಖಾ ತಂಡ ಹಾಗೂ ಕಡೂರು-ಬೀರೂರು ವೃತ್ತದ ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಎಸ್‍ಪಿ ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *