ಭಾರೀ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಡೆ- ಗುಡ್ಡ ಕುಸಿತ, ಧರೆಗುರುಳಿದ ಮರಗಳು

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

ಮೂರು ದಿನಗಳಿಂದ ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿತ್ತು. ಆದರೆ, ಸೋಮವಾರ ರಾತ್ರಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರದಲ್ಲಿ ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಜೀವ ನದಿಗಳಿಗೆ ಕಳೆ ಬಂದಿದ್ದು, ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಟ್ಟಿಗೆಹಾರ, ಚಾರ್ಮಾಡಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಚಾರ್ಮಾಡಿಯಲ್ಲಿ ರಸ್ತೆ ಬದಿಯ ಗುಡ್ಡ ಕುಸಿತ ಉಂಟಾಗುತ್ತಿದ್ದು, ಮಳೆ-ಗಾಳಿಗೆ ಮರಗಳು ಧರೆಗುರುಳುತ್ತಿವೆ.

ಶಾಲಾ-ಕಾಲೇಜುಗಳಿಗೆ ರಜೆ:
ಮಹಾ ಮಳೆ, ಪ್ರವಾಹ ಹಿನ್ನೆಲೆ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ರಾಮದುರ್ಗ ತಾಲೂಕು ಹೊರತುಪಡಿಸಿ ಬೆಳಗಾವಿಯಾದ್ಯಂತ ಶಾಲಾ-ಕಾಲೇಜಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಕರಾವಳಿ, ಮಲೆನಾಡು, ಉತ್ತರ ಕನ್ನಡದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕನ್ನಡದ ಹಳಿಯಾಳ, ದಾಂಡೇಲಿ ತಾಲೂಕು ಹೊರತುಪಡಿಸಿ ಉಳಿದ 9 ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ.

ಇತ್ತ ದಕ್ಷಿಣ ಕನ್ನಡದ ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಫೋಷಿಸಲಾಗಿದೆ. ಮಲೆನಾಡಿನ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲಿಯೂ ರಜೆ ನೀಡಲಾಗಿದೆ. ಹಾಸನದ ಬೇಲೂರು ತಾಲೂಕಿನ ಅರೆಹಳ್ಳಿ, ಚೀಕನಹಳ್ಳಿ ನಾರ್ವೆ ಹೋಬಳಿ, ಆಲೂರು ತಾಲ್ಲೂಕಿನ ಹೊಸಕೋಟೆ, ಕುಂದೂರು, ಪಾಳ್ಯ ಹೋಬಳಿಗಳ ಶಾಲೆ ಕಾಲೇಜುಗಳಿಗೆ ರಜೆ ಫೋಷಿಸಲಾಗಿದೆ.

Comments

Leave a Reply

Your email address will not be published. Required fields are marked *