ಆನೆ ದಂತ ಮಾರಾಟಕ್ಕೆ ಯತ್ನ – ಕೈ ಶಾಸಕನ ಆಪ್ತ ಅರೆಸ್ಟ್

ಚಿಕ್ಕಮಗಳೂರು: ಆನೆ ದಂತಗಳನ್ನು ಮಾರಾಟ ಮಾಡಲು ಕಾರಿನಲ್ಲಿ ಸಾಗಿಸುವ ವೇಳೆ ಪೊಲೀಸರು ಮಾಲಿನ ಸಮೇತ ನಾಲ್ವರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲೆಯ ಶೃಂಗೇರಿ ತಾಲೂಕಿನ ಶಬರೀಶ್, ವಿಜಯ್, ಯೋಗೀಶ್, ಮಧೂಸೂದನ್ ಬಂಧಿತ ಆರೋಪಿಗಳು. ಇವರು ಆನೆ ದಂತ ಹಾಗೂ ಐದು ಲಕ್ಷ ನಗದಿನೊಂದಿಗೆ ಸೆಲೆರಿಯೋ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸುವಾಗ ಗ್ರಾಮಾಂತರ ಪೊಲೀಸರು ಮೂಗ್ತಿಹಳ್ಳಿಯಲ್ಲಿ ಬಂಧಿಸಿದ್ದಾರೆ.

ಆರೋಪಿ ಶಬರೀಶ್ ಶೃಂಗೇರಿ ವಿಧಾನಸಭಾ ಕ್ಷೇತ್ರದ ಐಟಿ ಸೆಲ್ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ಆಪ್ತನಾಗಿದ್ದಾನೆ. ಕಾರಿನಲ್ಲಿ ಐದು ಲಕ್ಷ ನಗದು ಸಿಕ್ಕಿದ್ದು, ಶೃಂಗೇರಿಯ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನಗಳ ಪಾರ್ಕಿಂಗ್‍ಗೆ ಪಟ್ಟಣ ಪಂಚಾಯಿತಿ ಹರಾಜು ನಡೆಸಿತ್ತು. ಆ ಹರಾಜಿನಲ್ಲಿ ಶಬರೀಶ್ ಕೂಡ ಪಾಲ್ಗೊಂಡಿದ್ದ. ನಿನ್ನೆ ನಡೆದ ಹರಾಜಿನಲ್ಲಿ ವಾಹನ ಪಾರ್ಕಿಂಗ್ ಗುತ್ತಿಗೆ ಬೇರೆಯವರಿಗೆ ಆಗಿದ್ದು, ಆ ಐದು ಲಕ್ಷ ಹಣ ಹಾಗೂ ಎರಡು ಆನೆ ದಂತದೊಂದಿಗೆ ಶಬರೀಶ್ ಚಿಕ್ಕಮಗಳೂರಿಗೆ ಆಗಮಿಸುವಾಗ ಪೊಲೀಸರ ಬಲೆಗೆ ಬಿದಿದ್ದಾನೆ ಎನ್ನಲಾಗಿದೆ.

ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿದೆ. ಪೊಲೀಸರು ಬಂದೋಬಸ್ತ್ ನಲ್ಲಿ ಬ್ಯುಸಿ ಇರುತ್ತಾರೆ. ಸುಲಭವಾಗಿ ಸಾಗಿಸಬಹುದು ಅಥವಾ ಮಾರಾಟ ಮಾಡಬಹುದು ಎಂದು ಬಂದ ನಾಲ್ವರು ಮಾಲಿನ ಸಮೇತ ಪೊಲೀಸರು ಅತಿಥಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *