ಬಿಸಿಲು-ಮಳೆ ಏನೇ ಇರಲಿ, ಕುಡುಕರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ

ಚಿಕ್ಕಮಗಳೂರು: ಒಂದೂವರೆ ತಿಂಗಳ ಬಳಿಕ ಎಣ್ಣೆ ಸಿಕ್ಕ ಖುಷಿಗೆ ಮದ್ಯವ್ಯಸನಿಗಳು ಜಗತ್ತನ್ನೇ ಮರೆತು, ಮೈಮರೆತು ಎಣ್ಣೆಯ ನಶೆಯಲ್ಲಿ ತೇಲುತ್ತಿದ್ದಾರೆ. ಹೊಟ್ಟೆ ತುಂಬಾ ಕುಡಿದು ಎಲ್ಲೆಂದರಲ್ಲಿ ಬಿದ್ದರೂ ಕುಡುಕರಿಗೆ ಇನ್ನೂ ಸಮಾಧಾನ ಆಗಿಲ್ಲ ಅನಿಸುತ್ತಿದೆ. ಯಾಕಂದ್ರೆ ಮದ್ಯ ಪ್ರಿಯರು ಫುಲ್ ಟೈಟಾಗಿ ಮೈಮೇಲೆ ಜ್ಞಾನ ಇಲ್ಲದಂತೆ ಎದ್ದು-ಬಿದ್ದೋ ತೇಲ್ತಿರೋ ಘಟನೆ ಜಿಲ್ಲೆಯ ವಿವಿಧ ಭಾಗದಲ್ಲಿ ಇನ್ನೂ ನಿಂತಿಲ್ಲ.

ಫುಲ್ ಟೈಟಾಗಿ ರಸ್ತೆ ಮಧ್ಯೆ ಪ್ರಜ್ಞೆ ತಪ್ಪಿ ಮಲಗುತ್ತಿರುವ ಸನ್ನಿವೇಶಗಳು ಕಡಿಮೆಯಾಗಿಲ್ಲ. ಕೊರೊನಾ ಭಯದಿಂದ ದೇಶವೇ ಲಾಕ್‍ಡೌನ್ ಆಗಿ 42 ದಿನಗಳ ಕಾಲ ಎಣ್ಣೆ ಸಿಗದೆ ನರಕಯಾತನೆ ಅನುಭವಿಸಿದ್ದ ಎಣ್ಣೆ ಮಾಸ್ಟರ್ ಗಳು ಎಣ್ಣೆ ಸಿಕ್ಕಿದ್ದೇ ತಡ ಎಷ್ಟ್ ಬೇಕ್ ಅಷ್ಟ್ ಕುಡ್ದು ಎಲ್ ಬೇಕಲ್ಲಿ ಬೀಳ್ತಿದ್ದಾರೆ. ನಗರದ ಹಿರೇಮಗಳೂರಿನಲ್ಲಿ ವೃದ್ಧರೊಬ್ಬರು ಫುಲ್ ಟೈಟಾದ ಪರಿಣಾಮ ನಡೆಯಲು ಸಾಧ್ಯವಾಗದೇ ಪ್ರಜ್ಞೆ ತಪ್ಪಿ ರಸ್ತೆ ಬದಿಯೇ ಬಿದ್ದಿದ್ದರು. ಅವರಿಗೆ ಎದ್ದು ಕೂರಲು ಸಾಧ್ಯವಾಗಲಿಲ್ಲ.

ಹಣೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಎಚ್ಚರಗೊಳ್ಳದೆ ವೃದ್ಧ ಗಾಢ ನಿದ್ರೆಗೆ ಜಾರಿದ್ದರು. ಆದರೆ ಮುಖಕ್ಕೆ ಮಾಸ್ಕ್ ಹಾಕೋದನ್ನ ಮಾತ್ರ ಬಿಟ್ಟಿರಲಿಲ್ಲ. ಇಳಿ ಸಂಜೆಯಲ್ಲೇ ಫುಲ್ ಟೈಟಾಗಿ ಎಣ್ಣೆ ಮತ್ತಿನ ಗಮ್ಮತ್ತನ್ನ ರಸ್ತೆ ಮಧ್ಯೆಯೇ ಮಲಗಿ ಅನುಭವಿಸಿದ್ದಾರೆ. ಈ ದೃಶ್ಯವನ್ನ ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದು ಎಂಜಾಯ್ ಮಾಡಿದ್ದಾರೆ.

ಕೊಪ್ಪ ತಾಲೂಕಿನ ಬೈರೇದೇವರ ಗ್ರಾಮದಲ್ಲೂ ಕೂಡ ಮದ್ಯ ಪ್ರಿಯನೋರ್ವ ಜಗತ್ತಿನ ಅರಿವೇ ಇಲ್ಲದೆ ಟೈಟಾಗಿ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅಪ್ಪನ ಅವತಾರ ಕಂಡ ಮಗಳು ತಂದೆಯ ಕಿಕ್ ಇಳಿಸಲು ಮೈ ಮೇಲೆ ನೀರು ಸುರಿದು ತಂದೆಯನ್ನ ಎಬ್ಬಿಸಿದ್ದಾಳೆ. ತಲೆ ಮೇಲೆ ತಣ್ಣೀರು ಬೀಳುತ್ತಿದ್ದಂತೆ ಎದ್ದು ಕೂತು ಕೂಗಾಡಿ, ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದಾನೆ. ಆತನ ಕೂಗೋ ಧ್ವನಿಗೆ ಮಕ್ಕಳು ಕೂಡ ಹೆದರಿ ಓಡಿಹೋದರು.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಮದ್ಯವ್ಯಸನಿಗಳಿಬ್ಬರು ಅಂಗಡಿಯೊಂದರ ಮುಂಭಾಗದಲ್ಲಿ ಮಳೆ-ಗಾಳಿಯನ್ನೂ ಲೆಕ್ಕಿಸದೆ ಗಾಢ ನಿದ್ರೆಗೆ ಜಾರಿದ್ದರು. ಲಾಕ್‍ಡೌನ್‍ನಿಂದ ಎಣ್ಣೆ ಸಿಗದೇ ಕಂಗೆಟ್ಟಿದ್ದ ಮದ್ಯ ಪ್ರಿಯರು ಈಗ ಫುಲ್ ಬಾಟ್ಲು ಕುಡ್ದು ಗುಂಡಿನ ಮತ್ತೇ ಗಮ್ಮತ್ತು ಎಂದು ಕಂಡ-ಕಂಡಲ್ಲಿ ಪಾಚಿಕೊಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *