ದಂತ ಕದ್ದು ಸಿಕ್ಕಿಬಿದ್ದ ‘ಕೈ’ ಶಾಸಕನ ಆಪ್ತನ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ

ಚಿಕ್ಕಮಗಳೂರು: ಕಾರಿನಲ್ಲಿ ಆನೆ ದಂತ ಸಾಗಿಸುವಾಗ ಸಿಕ್ಕಿಬಿದ್ದ ಜಿಲ್ಲೆಯ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ಆಪ್ತನ ಮನೆ ಮೇಲೆ ದಾಳಿ ಮಾಡಿದಾಗ ಮತ್ತಷ್ಟು ಸ್ಫೋಟಕ ವಸ್ತುಗಳು ಸಿಕ್ಕಿವೆ.

ಶಾಸಕ ರಾಜೇಗೌಡರ ಆಪ್ತ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಐಟಿ ಸೆಲ್ ಮುಖ್ಯಸ್ಥ ಶಬರೀಶ್ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಶೃಂಗೇರಿಯ ಕಾಂಚಿನಗರದ ಶಬರೀಶ್ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ನಕ್ಷತ್ರ ಆಮೆ, ಕಲ್ಲು ಆಮೆ, ಗನ್, ಪಿಸ್ತೂಲ್, ಬುಲೆಟ್‍ಗಳು, ಗಂಧದ ತುಂಡುಗಳು ಹಾಗೂ ಜಿಲೆಟಿನ್ ಕಡ್ಡಿ ಸೇರಿದಂತೆ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಮನೆಯಲ್ಲಿದ್ದ ಶಬರೀಶ್ ತಂದೆ ರಮೇಶ್, ಮತ್ತೊಬ್ಬ ಆರೋಪಿ ವಿಶ್ವನಾಥ್‍ನನ್ನ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಹೊರವಲಯದಲ್ಲಿ ಕಾರಿನಲ್ಲಿ ಆನೆದಂತ ಸಾಗಿಸುವಾಗ ಶಬರೀಶ್ ಜೊತೆ ಮೂವರು ಸಿಕ್ಕಿಬಿದ್ದಿದ್ದರು. ಈ ಪ್ರಮಾಣದಲ್ಲಿ ತನ್ನ ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ ಶಬರೀಶ್, ಯಾವುದಾದರೂ ವಿಧ್ವಂಸಕ ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದನ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ.

ಈಗಾಗಲೇ ಬಂಧನಕ್ಕೊಳಗಾಗಿರೋ ಶಬರೀಶ್, ಯೋಗೀಶ್, ವಿಜಯ್ ಹಾಗೂ ಮಧುಸೂದನ್‍ನನ್ನ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕರು ಮೂಗು ತೂರಿಸಬಾರದು, ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *