ಡಿಸೆಂಬರ್‌ವರೆಗೂ ಕೊರೊನಾ ಆತಂಕ ದೇಶವನ್ನ ಕಾಡಬಹುದು: ವಿನಯ್ ಗುರೂಜಿ

– ಕೋವಿಡ್-19 ವಾರಿಯರ್ಸ್‌ಗೆ ಆರತಿ ಎತ್ತಿ, ಹೂಮಳೆಗೈದ ಗುರೂಜಿ

ಚಿಕ್ಕಮಗಳೂರು: ಕೊರೊನಾ ವಾರಿಯರ್ಸ್ ಗಳಿಗೆ ಗೌರಿಗದ್ದೆ ದತ್ತಶ್ರಮದ ಅವಧೂತ ವಿನಯ್ ಗುರೂಜಿ ಆರತಿ ಎತ್ತಿ, ಹೂಮಳೆಗೈದಿದ್ದಾರೆ.

ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಮರ್ಪಿಸಿದರು. ಹೆಲ್ತ್ ವಾರಿಯರ್ಸ್‍ಗೆ ವಿನಯ್ ಗುರೂಜಿ ಅವರು ಆರತಿ ಎತ್ತಿದರು. ಬಳಿಕ ಮೇಲ್ಭಾಗದಲ್ಲಿ ಕುಳಿತಿದ್ದ ಅವರ ಬಳಿಗೆ ಹೋಗಿ ಹೂಗಳನ್ನ ಸುರಿದು ಪುಷ್ಪಾರ್ಚನೆಯ ಮೂಲಕ ಗೌರವಿಸಿದ್ದಾರೆ.

ಈ ವೇಳೆ ಮಾತನಾಡಿದ ವಿನಯ್ ಗುರೂಜಿ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಅವರು ದೇಶ ಜನರ ಜೀವನ ಉಳಿಸಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಮಗೆ ಮರುಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.

ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಕೊರೊನಾ ವೈರಸ್‍ನಿಂದ ದೇಶವೇ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸೇನಾನಿಗಳ ಸೇವೆಯನ್ನ ದೇಶದ ಯಾರೊಬ್ಬರೂ ಮರೆಯಬಾರದು. ಹಾಗಾಗಿ ಗಾಂಧಿ ಮಾರ್ಗದ ಅನುಯಾಯಿಗಳಾಗಿರುವ ಆಶ್ರಮದ ವತಿಯಿಂದ ಕೊರೊನಾ ವಾರಿಯರ್ಸ್‍ಗೆ ಗೌರವ ಸೂಚಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಕೊರೊನಾ ವೈರಸ್ ಆತಂಕ ಡಿಸೆಂಬರ್‌ವರೆಗೂ ದೇಶವನ್ನ ಕಾಡಬಹುದು. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಾವು ಅಗ್ನಿಹೋತ್ರ ಹೋಮ ಹಾಗೂ ರುದ್ರ ಹೋಮ ಮಾಡಬೇಕು. ಸರ್ಕಾರದ ನಿರ್ದೇಶನಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರದ ಕಾಪಾಡಿಕೊಳ್ಳಬೇಕು ಎಂದು ವಿನಯ್ ಗುರೂಜಿ ಮನವಿ ಮಾಡಿಕೊಂಡರು.

ದೇಶದ ಹಲವೆಡೆ ಹೆಲ್ತ್ ವಾರಿಯರ್ಸ್ ಗಳ ಮೇಲೆ ಹಲ್ಲೆ ಮಾಡಿದ್ದಾರೆ, ನಿಂದಿಸಿದ್ದಾರೆ. ಸಮಾಜಕ್ಕೆ ಸಂದೇಶ ನೀಡುವ ಸಲುವಾಗಿ ಕೊರೊನಾ ಸೇನಾಸಿಗಳನ್ನು ಗೌರವಿಸಲಾಗಿದೆ. ಪ್ರಸ್ತುತ ಸ್ಥಿಯಲ್ಲಿ ಅವರ ಸೇವೆ ಸಮಾಜಕ್ಕೆ ಸ್ವಾಸ್ಥ್ಯಕ್ಕೆ ಅತಿ ಮುಖ್ಯವಾದುದು. ಅವರನ್ನ ಎಲ್ಲರೂ ಗೌರವಿಸಬೇಕು ಎಂದರು.

ಹೆಲ್ತ್ ವಾರಿಯರ್ಸ್ ಗಳ ಈ ಅಭಿನಂದನಾ ಸಮಾರಂಭದಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಬೇಳೂರು ರಾಘವೇಂದರ ಶೆಟ್ಟಿ, ಆಶ್ರಮದ ಕಾರ್ಯದರ್ಶಿ ಸುಧಾಕರ್ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *