ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ

– ಆಕೆಗೆ ಬೇಲ್ ಕೂಡ ಕೊಡುವುದಿಲ್ಲ

ಚಿಕ್ಕಮಗಳೂರು: ನನ್ನ ಮಗಳು ಮಾಡಿದ್ದು ತಪ್ಪು. ಪೊಲೀಸರು ಅವಳ ಕೈ-ಕಾಲು ಮುರಿಯಲಿ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ತಂದೆ ವಾಜೀದ್ ಹೇಳಿದ್ದಾರೆ.

ಪುತ್ರಿಯ ದೇಶದ್ರೋಹಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಾಜೀದ್ ಅವರು, ನನ್ನ ಮಗಳು ಮಾಡಿದ್ದನ್ನು ಕಂಡಿತ ಒಪ್ಪಿಕೊಳ್ಳುವುದಿಲ್ಲ. ಆಕೆ ಬೇಲ್ ಮೇಲೆ ಹೊರಗೆ ಬರುವುದು ಬೇಡ. 6 ತಿಂಗಳು ಜೈಲಿನಲ್ಲೇ ಇರಲಿ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅಕ್ಷರಶಃ ತಪ್ಪು. ಮಗಳ ನಡೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದರು.

ನಾನು ಎಷ್ಟೇ ಬುದ್ಧಿವಾದ ಹೇಳಿದರೂ ಮಗಳು ಕೇಳುತ್ತಿರಲಿಲ್ಲ. ಕೆಲ ಮುಸ್ಲಿಮರ ಜೊತೆ ಸೇರಿ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಳು. ಪೊಲೀಸರು ಆಕೆಯನ್ನು ಹೊರಗೆ ಬಿಡುವುದು ಬೇಡ. ನಾನು ಆಕೆಗೆ ಬೇಲ್ ಕೊಡಿಸುವುದಿಲ್ಲ, ಜೈಲಿನಲ್ಲೇ ಇರಲಿ. ಮಗಳ ಪರ ವಾದ ಮಾಡಲು ವಕೀಲರನ್ನು ನೇಮಕ ಮಾಡುವುದಿಲ್ಲ. ಸದ್ಯಕ್ಕೆ ಅವಳನ್ನು ಮನೆಗೂ ಸೇರಿಸುವುದಿಲ್ಲ. ಕಳೆದ ಐದು ದಿನದಿಂದ ಮಗಳು ನನ್ನ ಜೊತೆ ಯಾವುದೇ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿ ಅಮೂಲ್ಯ ಲಿಯೋನಾ ಯಾರು?

ನಾನು ಹೃದಯಾಘಾತ ಸಮಸ್ಯೆ ಎದುರಿಸುತ್ತಿರುವೆ, ಆಸ್ಪತ್ರೆಗೆ ಹೋಗಬೇಕು ಬೆಂಗಳೂರಿನಿಂದ ಬಾ ಅಂತ ಹೇಳಿದ್ದೆ. ಆದರೆ ಮಗಳು, ನನಗೆ ನಿನ್ನ ಜವಾಬ್ದಾರಿ ಇಲ್ಲ, ನಾನು ಬರುವುದಿಲ್ಲ. ನಿನ್ನ ಆರೋಗ್ಯ ಜವಾಬ್ದಾರಿ ನೀನೇ ನೋಡಿಕೋ ಎಂದಿದ್ದಳು. ಆಗ ನಾನು ಫೋನ್ ಕಟ್ ಮಾಡಿದೆ. ಆನಂತರ ನಾನು ಆಕೆಯನ್ನು ಸಂಪರ್ಕಿಸಿಲ್ಲ. ಮಗಳ ವಿರುದ್ಧ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿ. ಈ ವಿಚಾರದಲ್ಲಿ ನನ್ನದು ಏನು ಅಭ್ಯಂತರವಿಲ್ಲ ಎಂದು ಹೇಳಿದರು.

ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ ನಂತರ ಆಕೆಯ ಚಿಕ್ಕಮಗಳೂರಿನ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಬಳಿಕ ಅಮೂಲ್ಯ ತಂದೆ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರ ತಿಳಿದ ಕೂಡಲೆ ಕೊಪ್ಪ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಮೂಲ್ಯ ತಂದೆ ಕೆಲ ವರ್ಷಗಳ ಹಿಂದೆ ಮಲೆನಾಡಿನಲ್ಲಿ ನಡೆದ ಅಪ್ಪಿಕೊ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *