ಬೆಂಗ್ಳೂರಿನಿಂದ ಚಿಕ್ಕಮಗಳೂರಿಗೆ ಕರೆತರಲು 28 ಸಾವಿರ ಪಡೆದ ಅಂಬುಲೆನ್ಸ್ ಚಾಲಕ

– ಚಾಲಕ ಅರೆಸ್ಟ್, ವಾಹನದಲ್ಲಿ ಬಂದವರು ಕ್ವಾರಂಟೈನ್ ಘಟಕಕ್ಕೆ

ಚಿಕ್ಕಮಗಳೂರು: ಕೊರೊನಾ ಆತಂಕ ದಿನದಿಂದ ದಿನಕ್ಕೆ ವಿಶ್ವವನ್ನೇ ಕಿತ್ತು ತಿನ್ನುತ್ತಿದೆ. ಪರಿಸ್ಥಿತಿಯನ್ನ ನಿಯಂತ್ರಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಡುತ್ತಿವೆ. ಆದರೆ ಅಂಬುಲೆನ್ಸ್ ಚಾಲಕರು ಕೊರೊನಾ ಆತಂಕವನ್ನೇ ದುರ್ಬಳಕೆ ಮಾಡಿಕೊಂಡು ಜನರಿಂದ ಹಣವನ್ನೂ ಪೀಕುವುದರ ಜೊತೆ ಸರ್ಕಾರದ ಕಣ್ಣಿಗೂ ಮಣ್ಣೆರೆಚುತ್ತಿದ್ದಾರೆ.

ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಐದು ಜನಕ್ಕೆ 28 ಸಾವಿರ ಬಾಡಿಗೆ ಮಾತನಾಡಿಕೊಂಡು ಬಂದ ಅಂಬುಲೆನ್ಸ್ ಚಾಲಕನನ್ನು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಅಂಬುಲೆನ್ಸ್ ಈ ಹಳ್ಳಿಗೆ ಯಾಕೆ ಹೋಗುತ್ತಿದೆ ಎಂದು ಅನುಮಾನಗೊಂಡ ಪೊಲೀಸರು ಚೆಕ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ಬಂದ ಅಂಬುಲೆನ್ಸ್ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿಯ ಹೊಸ ಗಂಗೂರು ಗ್ರಾಮದ ಐವರನ್ನು ಚಿಕ್ಕಮಗಳೂರಿಗೆ ಕರೆ ತಂದಿತ್ತು. ಆದರೆ ಅಂಬುಲೆನ್ಸ್ ಅನ್ನೋ ಕಾರಣಕ್ಕೆ ಯಾವ ಚೆಕ್ ಪೋಸ್ಟ್ ನಲ್ಲೂ ಕೂಡ ತಪಾಸಣೆ ಮಾಡಿಲ್ಲ. ಆದರೆ ಗಾಡಿಯನ್ನು ಚೆಕ್ ಮಾಡಿದ ಲಿಂಗದಹಳ್ಳಿ ಪೊಲೀಸರು ಆಂಬುಲೆನ್ಸ್ ವಶಕ್ಕೆ ಪಡೆದು, ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಆಂಬುಲೆನ್ಸ್‍ನಲ್ಲಿ ಬಂದ ಹೊಸ ಗಂಗೂರಿನ ಐವರನ್ನು ಲಿಂಗದಹಳ್ಳಿಯಲ್ಲಿರೋ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *