ಬೈಕ್ ತಪ್ಪಿಸಲು ಹೋಗಿ ಇನ್ನೋವಾ ಕಾರು ಪಲ್ಟಿ: ಮಗು ಸೇರಿದಂತೆ ನಾಲ್ವರು ಸಾವು

ಚಿಕ್ಕಬಳ್ಳಾಪುರ: ಬೈಕ್ ತಪ್ಪಿಸಲು ಹೋಗಿ ಇನ್ನೋವಾ ಕಾರು ಪಲ್ಟಿ ಹೊಡೆದು ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ನಡೆದಿದೆ.

ಯಲಹಂಕದ ಶಿವಕೋಟೆ ಗ್ರಾಮದ ಪಾರ್ವತಮ್ಮ (30), ನಾಗಮ್ಮ, ಪಲ್ಸರ್ ಬೈಕ್ ಸವಾರ ಶಶಿಕುಮಾರ್ (35) ಹಾಗೂ ಒಂದು ವರ್ಷದ ಮಗು ಮೃತ ದುರ್ದೈವಿಗಳು. ಇನ್ನೋವಾ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಕೋಟೆ ಗ್ರಾಮದ ಪಾರ್ವತಮ್ಮ ಹಾಗೂ ಸಂಬಂಧಿಕರು ಬೀಗರ ಊಟಕ್ಕಾಗಿ ದೇವನಹಳ್ಳಿಯ ಪುಟ್ಟಪ್ಪನಗುಡಿ ಬೀದಿಗೆ ಹೋಗಿದ್ದರು. ಊಟ ಮುಗಿಸಿಕೊಂಡು ಮರಳುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಕನ್ನಮಂಗಲಪಾಳ್ಯ ಗೇಟ್ ಬಳಿ ಪಲ್ಸರ್ ಬೈಕ್ ಏಕಾಏಕಿ ಅಡ್ಡ ಬಂದಿದೆ. ಬೈಕ್ ತಪ್ಪಿಸಲು ಮುಂದಾದ ಚಾಲಕ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ರಸ್ತೆಯ ಪಕ್ಕದ ಡಿವೈಡರ್ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಪರಿಣಾಮ ಇನ್ನೋವಾ ಕಾರಿನಲ್ಲಿದ್ದ ಮೂವರು ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಬೈಕ್ ಸವಾರನ ಅಜಾಗರುಕತೆಯೇ ಕಾರಣ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಏರ್‍ಪೋರ್ಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಕೆಐಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

Comments

Leave a Reply

Your email address will not be published. Required fields are marked *