– ಮೋದಿ ತುಘಲಕ್ ಸರ್ಕಾರ ನಡೆಸ್ತಿದ್ದಾರೆ
ಚಿಕ್ಕಬಳ್ಳಾಪುರ: ಸಿಎಎ, ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ, ಸರ್ವೆ ಮಾಡಲು ಬಂದಾಗ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಬೇಡಿ. ಒಂದು ವೇಳೆ ನೀಡಿದರೆ ನಿಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರಿ ಎಂದು ಸ್ವಯಂ ನಿವೃತ್ತಿ ಹೊಂದಿರುವ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಚಿಂತಾಮಣಿ ನಗರದಲ್ಲಿ ಪ್ರಗತಿಪರ ಓಕ್ಕೂಟಗಳ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು. ಮೌನ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ನಡೆದ ವಿಚಾರ ಸಂಕಿರಣದಲ್ಲಿ ಸೆಂಥಿಲ್ ಮಾತನಾಡಿದರು. ಅಧಿಕಾರಿಗಳು ಮಾಹಿತಿ ಕೇಳಲು ಬಂದರೆ ನಾವು ಮಾಹಿತಿ ನೀಡುವುದಿಲ್ಲವೆಂದು ವಾಪಸ್ ಕಳುಹಿಸಿ. ದೇಶದ 11 ರಾಜ್ಯಗಳು ಈ ಕಾಯ್ದೆಗಳನ್ನು ಜಾರಿ ಮಾಡಲ್ಲವೆಂದು ತಿಳಿಸಿವೆ. 2 ರಾಜ್ಯಗಳು ಇವುಗಳ ವಿರುದ್ಧ ರೆಗ್ಯುಲೇಷನ್ ಪಾಸ್ ಮಾಡಿವೆ. ನಾವು ಸಹ ಆ ಮಾರ್ಗದಲ್ಲಿಯೇ ಈ ಕಾಯ್ದೆಗಳನ್ನು ತಿರಸ್ಕರಿಸಬೇಕು ಎಂದರು.

ಇದು ದೇಶದ ಸಮಸ್ಯೆಯಲ್ಲ, ನಮ್ಮ ನಿಮ್ಮ ಮನೆಯ ಸಮಸ್ಯೆ, ಇಂತಹ ಕಾಯ್ದೆಗಳನ್ನು ತಿರಸ್ಕರಿಸದೆ ಇವರನ್ನು ಹೀಗೆಯೇ ಬಿಟ್ಟರೆ ದೇಶವನ್ನು ಮಾರಿಬಿಡುತ್ತಾರೆ. ಆದ್ದರಿಂದ ಎಲ್ಲರೂ ಇದನ್ನು ಪ್ರತಿಭಟಿಸಬೇಕು ಎಂದು ತಿಳಿಸಿದರು.
ನಮ್ಮ ದೇಶ ಸೆಕ್ಯೂಲರ್ ಸಿದ್ಧಾಂತ ಇರುವಂತಹದು ಅಂದ ಮಾತ್ರಕ್ಕೆ ಧರ್ಮ ಇಲ್ಲವೆಂದಲ್ಲ. ಆದರೆ ನಮ್ಮ ಸಂವಿಧಾನದ ಕಾಯ್ದೆಗಳನ್ನು ಧರ್ಮದ ಆಧಾರದ ಮೇಲೆ ರೂಪಿಸಬಾರದು, ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಗಳು ಅಕ್ರಮ ನುಸುಳುಕೋರರನ್ನು ತಡೆಗಟ್ಟಲು ಮಾತ್ರ. ಆದರೆ ದೇಶದ ಎಲ್ಲರನ್ನೂ ನಿಲ್ಲಿಸಿ ಅವರ ಪೌರತ್ವದ ಬಗ್ಗೆ ಪ್ರಶ್ನೆ ಮಾಡುವುದಲ್ಲ ಎಂದರು.

ಪ್ರಧಾನಿ ಮೋದಿಯವರು ಒಂದು ರೀತಿಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅವರ ಸುತ್ತಲಿನ ಎಲ್ಲರೂ ಕಳ್ಳರು, ಇದನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರನ್ನು ದೇಶವಿರೋಧಿಗಳು ಎಂದು ಬಿಂಬಿಸುತ್ತಾರೆ. ನೋಟು ಅಮಾನ್ಯೀಕರಣ, ಜಿಎಸ್‍ಟಿ ಮುಂತಾದ ಕೆಲವು ತಪ್ಪು ನಿರ್ಣಯಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಶೇ.2ರಷ್ಟು ಕುಸಿದಿದೆ, ಅನೇಕ ಕೈಗಾರಿಕೆಗಳು ಮುಚ್ಚಿವೆ ಎಂದು ಮೋದಿ ವಿರುದ್ಧ ಕಿಡಿಕಾರಿದರು.

Leave a Reply