ಪರಿಸರ ರಕ್ಷಣೆ ಮಾಡೋದು ಬಹು ದೊಡ್ಡ ಸವಾಲು- ಡಾ.ಕೆ. ಸುಧಾಕರ್

– ಬೆಳ್ಳಂದೂರು ಮಾಲಿನ್ಯ ನಿಯಂತ್ರಣಕ್ಕೆ ಮೊದಲ ಆದ್ಯತೆ

ಚಿಕ್ಕಬಳ್ಳಾಪುರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ಕೇವಲ ಹುದ್ದೆಯಲ್ಲ ಇದೊಂದು ಜವಾಬ್ದಾರಿ. 21 ನೇ ಶತಮಾನದಲ್ಲಿ ಪರಿಸರ ರಕ್ಷಣೆ ಮಾಡುವುದು ದೊಡ್ಡ ಸವಾಲು ಎಂದು ನೂತನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಸುಧಾಕರ್, ನೇರವಾಗಿ ತಾಲೂಕಿನ ನಂದಿ ಗ್ರಾಮದ ಪ್ರಸಿದ್ಧ ಶ್ರೀಭೋಗನಂದೀಶ್ವರನ ದೇಗುಲಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ನನ್ನ ಮೊದಲ ಆದ್ಯತೆ ಎಂದರು.

ಬೆಂಗಳೂರಿನ ಬೆಳ್ಳಂದೂರು ಕೆರೆ ಮಾಲಿನ್ಯ ತಡೆಗಟ್ಟೋದು ನನ್ನ ಮೊದಲ ಆದ್ಯತೆಗಳಲ್ಲೊಂದಾಗಿದೆ. ಈಗಾಗಲೇ ಮಾನ್ಯ ಉಚ್ಛ ನ್ಯಾಯಾಲಯ ಬೆಳ್ಳಂದೂರು ಕೆರೆಯ ಸಂರಕ್ಷಣೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದೆ. ಈ ಸಂಬಂಧ ಜುಲೈ 1 ರಂದು ತಜ್ಞರ ಜೊತೆ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.

ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿ ಮಂಜುನಾಥ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ಈ ಹಿಂದೆ ತೆಗೆದುಕೊಂಡ ತೀರ್ಮಾನದಂತೆ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೊಡುವುದಾಗಿ ಮೊದಲೇ ಮಾತುಕತೆ ಆಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗೂಂಡೂರಾವ್ ಸೂಚಿಸಿದ್ದಾರೆ ಎಂದು ಹೇಳಿದರು.

ಮೈತ್ರಿ ಸರ್ಕಾರದ ದೋಸ್ತಿ ಪಕ್ಷ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರೊದು ಸರಿಯಲ್ಲ. ಉನ್ನತ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕಿದೆ. ಆದರೂ ಜೆಡಿಎಸ್‍ನವರಿಗೆ ಅಧ್ಯಕ್ಷ ಸ್ಥಾನ ಕೊಡೋದಿಲ್ಲ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *