ಮತ ಎಣಿಕೆ ದಿನ ಬಿಜೆಪಿ ಕಾರ್ಯಕರ್ತರಿಗೆ ಸಮವಸ್ತ್ರ ಕಡ್ಡಾಯ

ಚಿಕ್ಕಬಳ್ಳಾಪುರ: ಉಪಚುನಾವಣಾ ಕಣದ ಫಲಿತಾಂಶ ಸೋಮವಾರ ಹೊರಬೀಳಲಿದ್ದು, ಎಲ್ಲರ ಕೂತೂಹಲ ಫಲಿತಾಂಶದತ್ತ ನೆಟ್ಟಿದೆ. ಆದರೆ ಇತ್ತ ಚುನಾವಣಾ ಫಲಿತಾಂಶದ ಮತ ಎಣಿಕೆ ವೇಳೆ ಆಗಮಿಸುವ ಬಿಜೆಪಿ ಕಾರ್ಯಕರ್ತರೆಲ್ಲಾ ಬಿಳಿ ವಸ್ತ್ರ ಹಾಗೂ ಕೇಸರಿ ಶಲ್ಯ ಧರಿಸಿ ಆಗಮಿಸುವಂತೆ ಮನವಿ ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಆಗಮಿಸುವಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಬೆಂಬಲಿಗರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅದರಲ್ಲೂ ಎಲ್ಲರೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿ ಬರಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಡಲಾಗಿದೆ.

ಬಿಜೆಪಿ ಕಾರ್ಯಕರ್ತರು ಹಾಗೂ ಸುಧಾಕರ್ ಬೆಂಬಲಿಗರು ಮತದಾನದ ದಿನವೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿದ್ದರು. ಇದು ವಿಶೇಷವಾಗಿ ಎಲ್ಲರ ಗಮನ ಸೆಳೆದಿತ್ತು. ಈಗ ಮತ ಎಣಿಕೆ ದಿನವೂ ಕೇಸರಿ ಹಾಗೂ ಬಿಳಿ ಬಟ್ಟೆ ಧರಿಸಲು ತಿಳಿಸಲಾಗಿದೆ.

ಮತ ಎಣಿಕೆ ದಿನ ನಿಷೇಧಾಜ್ಞೆ ಜಾರಿ:
ಮತ ಎಣಿಕೆ ಕಾರ್ಯಯು ನಗರದ ಬಿಬಿ ರಸ್ತೆಯ ಜೂನಿಯರ್ ಕಾಲೇಜು ಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂ ಬಳಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. 10 ಟೇಬಲ್‍ಗಳ ಮೂಲಕ 26 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 09 ರ ಬೆಳಗ್ಗೆ 06ರಿಂದ ಡಿಸೆಂಬರ್ 10ರ ಬೆಳಗ್ಗೆ 06 ರವರೆಗೆ ವಿಧಾನಸಭಾ ಕ್ಷೇತ್ರಾದ್ಯಾಂತ 144 ಸೆಕ್ಷೆನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅರ್ ಲತಾ ಆದೇಶಿಸಿದ್ದಾರೆ.

Comments

Leave a Reply

Your email address will not be published. Required fields are marked *