ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿ ಕಿಂಡಿ ಕೊರೆದು ಬಾರ್‌ನಲ್ಲಿ ಮದ್ಯ ಕಳವು

ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಲಾಗಿದೆ.

ಬಾರ್ ಅಂಡ್ ರೆಸ್ಟೋರೆಂಟ್‍ನ ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿರುವ ಖದೀಮರು, ಬಾರ್ ಹಿಂಭಾಗದಲ್ಲಿ ಗೋಡೆಗೆ ಕಿಂಡಿಕೊರೆದು ಮದ್ಯ ಕಳವು ಮಾಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ನಂದಿಗಿರಿಧಾಮ ಪಿಎಸ್‍ಐ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾಕ್‍ಡೌನ್ ಹಿನ್ನಲೆ ಮದ್ಯದಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಜಿಲ್ಲೆಯಲ್ಲಿ ಮದ್ಯದಂಗಡಿಗಳ ಕಳ್ಳತನ ಮುಂದುವರಿದಿದೆ. ಏಪ್ರಿಲ್ 15ರಂದು ಚಿಕ್ಕಬಳ್ಳಾಪುರ ನಗರದಲ್ಲೂ ಸಹ ಬಾರ್ ಗೋಡೆ ಕೊರೆದು ಮದ್ಯ ಕಳವು ಮಾಡಲಾಗಿತ್ತು. ನಂತರ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವೈ ಹುಣಸೇನಹಳ್ಳಿ ಹಾಗೂ ಜೆ ವೆಂಕಟಾಪುರದ ಬಳಿಯ ಬಾರ್‌ಗಳಲ್ಲೂ ಕಳ್ಳತನ ಮಾಡಲಾಗಿತ್ತು. ಈಗ ರಂಗಸ್ವಾಮಿ ಎಂಬವರಿಗೆ ಸೇರಿದ ಗೋಲ್ಡನ್ ಬಾರ್‍ನಲ್ಲಿ ಮದ್ಯ ಕಳವು ಮಾಡಲಾಗಿದೆ.

ಮದ್ಯ ಸಿಗದೆ ಕಂಗಲಾದ ಮದ್ಯಪ್ರಿಯರು ಕಳ್ಳತನ ಮಾಡಿದ್ರಾ ಅಥವಾ ಲಾಕ್‍ಡೌನ್ ನಡುವೆ ಒಂದಕ್ಕೆ ಹತ್ತು ಪಟ್ಟು ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡೋಕೆ ಖದೀಮರು ಸಂಚು ಹೂಡಿ ಕಳವು ಮಾಡಿದ್ರಾ ಎಂಬ ಅನುಮಾನ ಮೂಡಿದೆ. ಅಂದಹಾಗೆ ಲಾಕ್‍ಡೌನ್ ನಡುವೆ ಬಾರ್‌ಗಳು ಮುಚ್ಚಿದ್ರೂ 100 ರೂ. ಮದ್ಯವನ್ನು 1,000 ರೂ.ಗೆ ಅಕ್ರಮವಾಗಿ ಕದ್ದು ಮುಚ್ಚಿ ಮಾರಾಟವಾಗುತ್ತಿದೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *