ರಾಮನಗರ ಜಿಲ್ಲೆ ಹೆಸರು ಬದಲಾವಣೆ ಇಲ್ಲ ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು: ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿದ್ದ ರಾಮನಗರ ಜಿಲ್ಲೆ ಹೆಸರು ಬದಲಾವಣೆ ನಿರ್ಧಾರದಿಂದ ಬಿಜೆಪಿ ಸರ್ಕಾರ ಯೂಟರ್ನ್ ಹೊಡೆದಿದೆ. ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಸಿಎಂ ಯಡಿಯೂರಪ್ಪ ಅವರ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದ್ದು, ರಾಮನಗರ ಜಿಲ್ಲೆ ಹೆಸರು ಬದಲಾವಣೆ ಇಲ್ಲ ಅಂತ ಕಡ್ಡಿತುಂಡು ಮಾಡುವ ಹಾಗಿ ಹೇಳಿದ್ದಾರೆ. ರಾಮನಗರ ಹೆಸರನ್ನ ಅಭಿವೃದ್ಧಿ ದೃಷ್ಟಿಯಿಂದ ನವ ಬೆಂಗಳೂರು ಅಂತ ಬದಲಾವಣೆ ಮಾಡಲಾಗುತ್ತೆ ಅಂತ ಸುದ್ದಿ ಪ್ರಚಾರವಾಗಿತ್ತು. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಹಾದಿಯಾಗಿ ವಿಪಕ್ಷ ನಾಯಕರು ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಅವರಂತೂ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟಿದ್ದರು. ಈಗ ಹೆಸರು ಗೊಂದಲಕ್ಕೆ ಸಿಎಂ ಯಡಿಯೂರಪ್ಪ ತೆರೆ ಎಳೆದಿದ್ದಾರೆ.

ಸಿಎಂ ಪತ್ರಿಕಾ ಹೇಳಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರ್ಕಾರದ ಮುಂದೆ ಆ ತರಹದ ಯಾವುದೇ ಯೋಚನೆ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳು ಯಾವುದೇ ಹುರುಳಿಲ್ಲದ ಚರ್ಚೆಯಲ್ಲಿ ತೊಡಗಿದ್ದಾರೆ ಅಂತ ಕಿಡಿಕಾರಿದ್ದಾರೆ. ಬಹುಶಃ ಎರಡು ಪಕ್ಷಗಳ ನಾಯಕರುಗಳು ಸದಾ ಸುದ್ದಿಯಲ್ಲಿರಲು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ಮುಂದೆ ಯಾವುದೇ ಆ ತರಹದ ವಿಷಯವಾಗಲಿ ಅಥವಾ ಕಾರ್ಯಸೂಚಿಯಾಗಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಮನ ಬಗ್ಗೆ ಪ್ರಶ್ನೆ ಮಾಡಿದ ವಿಪಕ್ಷ ನಾಯಕರಿಗೆ ಟಾಂಗ್ ಕೊಟ್ಟಿರುವ ಸಿಎಂ ಯಡಿಯೂರಪ್ಪ ಅವರು, ಶ್ರೀ ರಾಮನ ಬಗ್ಗೆ ನಮಗೆ ಇರುವ ಭಕ್ತಿಯಾಗಲೀ ಅಥವಾ ಅಭಿಮಾನವಾಗಲೀ ಯಾರು ಪ್ರಶ್ನಿಸಲು ಸಾಧ್ಯವಿಲ್ಲ. ನನಗೆ ಆಶ್ಚರ್ಯವೇನೆಂದರೆ ಕಾಂಗ್ರೆಸ್‍ನವರಿಗಾಗಲೀ ಜೆಡಿಎಸ್‍ನವರಿಗಾಗಲೀ ರಾಮನ ಬಗ್ಗೆ ಭಕ್ತಿ ಹುಟ್ಟಿದ್ದು. ಅವರ ಭಕ್ತಿ ನಿಜವಾಗಿದ್ದರೆ ಅದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲದ ವಿಷಯದ ಬಗ್ಗೆ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *