ತೈಲ ಸೋರಿಕೆಯಿಂದ ತತ್ತರಿಸಿದ ಚೆನ್ನೈ ಬೀಚ್ – ಜಲಚರಗಳ ಸಾವು, ಸಾವಿರಾರು ಜನರಿಂದ ಶುದ್ಧೀಕರಣ

ಚೆನ್ನೈ: ಶನಿವಾರದಂದು ಚೆನ್ನೈನ ಕಾಮರಾಜರ್ ಬಂದರಿನಲ್ಲಿ ಎರಡು ಹಡಗುಗಳ ಮಧ್ಯೆ ಸಂಭವಿಸಿದ ಅಪಘಾತದಿಂದ ಸುಮಾರು 15-20 ಟನ್‍ನಷ್ಟು ತೈಲ ಸಮುದ್ರ ಸೇರಿದ್ದು, ಕಡಲತೀರದ ಸುಮಾರು 30 ಕಿಮೀ ಪ್ರದೇಶ ಹಾನಿಗೊಳಗಾಗಿದೆ.

ಈ ಎರಡು ಹಡಗುಗಳು ಪೆಟ್ರೋಲಿಯಂ ಆಯಿಲ್ ಲೂಬ್ರಿಕೆಂಟ್ ಮತ್ತು ಎಲ್‍ಪಿಜಿಯನ್ನು ಹೊತ್ತು ಸಾಗುತ್ತಿದ್ದವು ಎಂದು ವರದಿಯಾಗಿದೆ. ಸಮುದ್ರದ ಸರಿಸುಮಾರು 30 ಕಿಲೋಮೀಟರ್ ಉದ್ದ ನೀರಿನಲ್ಲಿ ತೈಲ ತೇಲುತ್ತಿದ್ದು ಆಮೆ, ಮೀನುಗಳು ಸಾವನ್ನಪ್ಪಿವೆ. ಪರಿಸ್ಥಿತಿ ಗಂಭೀರವಾಗಿದ್ದು ಸಮುದ್ರದಲ್ಲಿರುವ ತೈಲ ಹೊರ ತೆಗೆಯಲು ಸಾವಿರಾರು ಜನ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರದ ನೀರಿನ ಮೇಲೆ ತೈಲ ತೇಲುತ್ತಿರೋದ್ರಿಂದ ನೂರಾರು ಹಡುಗುಗಳು ಕಾರ್ಯಸ್ಥಗಿತಗೊಳಿಸಿವೆ.ಯಂತ್ರಗಳಿಂದ ತೈಲವನ್ನು ಹೊರತೆಗೆಯುವುದು ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಕೈಯ್ಯಿಂದಲೇ ಕೆಸರನ್ನು ಹೊರತೆಗೆಯುತ್ತಿದ್ದಾರೆ.

ಈ ಅವಘಡದ ಬಗ್ಗೆ ಮಾತನಾಡಿರೋ ತಮಿಳುನಾಡು ಮೀನುಗಾರಿಕಾ ಇಲಾಖೆಯ ಸಚಿವ ಜಯಕುಮಾರ್, 60 ಟನ್‍ನಷ್ಟು ಕೆಸರು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಮೀನುಗಾರರು, ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1500 ಮಂದಿ ಸ್ವಯಂಸೇವಕರು ಸಮುದ್ರದಿಂದ ತೈಲವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಶೇ. 85ರಷ್ಟು ಕೆಲಸ ಮುಗಿಗಿದೆ. ಇನ್ನುಳಿದ 20 ಟನ್ ಕೆಸರನ್ನು ಮುಂದಿನ ಎರಡು ದಿನಗಳಲ್ಲಿ ಹೊರತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ತೈಲ ಸೋರಿಕೆಯ ವಿಷಯ ತಿಳಿದು ಜನರು ಮಾರುಕಟ್ಟೆಯಲ್ಲಿ ಮೀನು ಕೊಳ್ಳಲು ಹಿಂಜರಿಯುತ್ತಿದ್ದು, ವ್ಯಾಪಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.

Comments

Leave a Reply

Your email address will not be published. Required fields are marked *