ಹೆಚ್‌ಡಿಕೆ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ರು: ಸಚಿವ ಚಲುವರಾಯಸ್ವಾಮಿ

ಮಂಡ್ಯ: ನಿರ್ಮಲಾನಂದನಾಥ ಶ್ರೀಗಳ (Nirmalanandanatha Swamiji) ಫೋನ್‌ನ್ನು ಕುಮಾರಸ್ವಾಮಿ (H.D.Kumaraswamy) ಟ್ಯಾಪ್ ಮಾಡಿಸಿದ್ರು. ಈಗ ಹೇಗೆ ಹೋಗಿ ಶ್ರೀಗಳ ಬಳಿ ಆಶೀರ್ವಾದ ಕೇಳ್ತಾರೆ ಎಂದು ಸಚಿವ ಚಲುವರಾಯಸ್ವಾಮಿ (Cheluvarayaswamy), ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ನ್ನು ಟ್ಯಾಪ್ ಮಾಡಿದ್ದಾರೆ. ಇದೀಗ ಹೇಗೆ ಅವರ ಬಳಿ ಹೋಗಿ ಕುಮಾರಸ್ವಾಮಿ ಆಶೀರ್ವಾದ ಕೇಳ್ತ ಇದ್ದಾರೆ. ನಾವು ಸಹ ಜೆಎಸ್‌ಎಸ್, ಸಿದ್ದಗಂಗಾ, ಚುಂಚನಗಿರಿ ಮಠಗಳಿಗೆ ನಾವು ಹೋಗಿದ್ದೀವಿ, ಅವರು ಹೋಗಿದ್ದಾರೆ. ಇದು ಚುನಾವಣೆ ವೇಳೆ ಸಹಜವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಕಾರ್ಯಕ್ರಮಕ್ಕೆ ಹೆಚ್‍ಡಿಕೆ ಹೋಗಿ ಬರೋದ್ರೊಳಗೆ ಆಪರೇಷನ್ ಮುಗಿದು ಹೋಗಿತ್ತು: ಡಿಕೆಶಿ

ಕುಮಾರಸ್ವಾಮಿ, ಸ್ವಾಮೀಜಿ ಫೋನ್ ಟ್ಯಾಪ್ ಮಾಡಿದ್ದಾರೆ. ಸ್ವಾಮೀಜಿಗಳು ಯಾರಿಗೂ ಪ್ರಚಾರ ಮಾಡೋಕೆ ಆಗಲ್ಲ. ಚುಂಚನಗಿರಿ ಮಠ ಒಕ್ಕಲಿಗ ಸಮುದಾಯ ಮಠ ಆದ್ರೂ ಸಹ ರಾಜ್ಯದಲ್ಲಿ ಅತ್ಯಂತ ಜಾತ್ಯತೀತ ಮಠವಾಗಿದೆ. ಎಲ್ಲಾ ಜಾತಿಗಳನ್ನು ಪ್ರೀತಿಸಿ ಬೆಳೆಸಿದವರು ಬಾಲಗಂಗಾಧರನಾಥ ಶ್ರೀಗಳು. ಜೆಡಿಎಸ್‌ನವರು ಬಾಲಗಂಗಾಧರ ಶ್ರೀಗಳಿಗೆ ಎಷ್ಟು ಕಿರುಕುಳ‌ ಕೊಟ್ಟರು ಎಂದು ಸಹ ಗೊತ್ತಿದೆ. ಈಗ ಚುನಾವಣೆ ಬಂದಿದೆ. ಅದಕ್ಕೆ ಮಠಕ್ಕೆ‌ ಕುಮಾರಸ್ವಾಮಿ ಹೋಗ್ತಾ ಇದ್ದಾರೆ ಅಷ್ಟೇ ಎಂದಿದ್ದಾರೆ.