ಕಾಶ್ಮೀರ: ಚಿರತೆಯೊಂದು ಮನೆಗೆ ನುಗ್ಗಿ 3 ವರ್ಷದ ಬಾಲಕನನ್ನು ಎಳೆದುಕೊಂಡು ಹೋಗಿ ಸಾಯಿಸಿರುವ ದಾರುಣ ಘಟನೆ ಜಮ್ಮು- ಕಾಶ್ಮೀರದಲ್ಲಿ ನಡೆದಿದೆ.
ವಾಸಿಮ್ ಅಕ್ರಮ್ ಎಂಬ ಮೂರು ವರ್ಷದ ಬಾಲಕನನ್ನು ಚಿರತೆ ಸಾಯಿಸಿದೆ. ಬಾಲಕ ತನ್ನ ಮನೆಯಲ್ಲಿ ತಾಯಿಯ ಜೊತೆ ಅಡುಗೆ ಮನೆಯಲ್ಲಿದ್ದಾಗ ಚಿರತೆಯೊಂದು ಏಕಾಏಕಿ ನುಗ್ಗಿ ಮಗುವನ್ನು ಬಾಯಿಯಲ್ಲಿ ಕಚ್ಚಿ ಎಳೆದುಕೊಂಡು ಹೋಗಿದೆ.
ಘಟನೆ ಕುರಿತು ತಕ್ಷಣ ಬಾಲಕನ ತಾಯಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಮಗುವನ್ನು ಹುಡುಕಲು ಅರಣ್ಯಕ್ಕೆ ಹೋದ ಸಿಬ್ಬಂದಿಗೆ ತಲೆ ಇಲ್ಲದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಾಲಕನ ಮೃತದೇಹವನ್ನು ಪೋಷಕರಿಗೆ ಒಪ್ಪಿಸಿದ್ದು, ಚಿರತೆಯನ್ನು ಸೆರೆಹಿಡಿಯುವ ಪ್ರಯತ್ನ ಸಾಗಿದೆ.

ಬುಧವಾರ ಬೆಳಗ್ಗೆ ಜಮ್ಮುವಿನ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಕೊಂಡಿತ್ತು. ಆದರೆ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಅರಣ್ಯದ ಸಮೀಪ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ ಎಂದು ಜಮ್ಮುವಿನ ಪ್ರದೇಶಿಕ ವನ್ಯಜೀವಿ ಅಧಿಕಾರಿ ತಾಹಿರ್ ಅಹ್ಮದ್ ಶಾವ್ಲ್ ತಿಳಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಮನುಷ್ಯರ ಓಡಾಟ ಇತ್ತೀಚಿಗೆ ಹೆಚ್ಚಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡುವುದರಿಂದ ವನ್ಯಜೀವಿಗಳು ನಾಡಿಗೆ ಬರುತ್ತಿದೆ. ಸುಮಾರು 12 ಸಾವಿರದಿಂದ 14 ಸಾವಿರ ಚಿರತೆಗಳು ಭಾರತದಲ್ಲಿ ಇದೆ. ಆದರೆ 2017ರಲ್ಲಿ 431 ಚಿರತೆಗಳನ್ನು ಭೇಟೆಯಾಡಲಾಗಿದೆ. ನಗರ ಪ್ರದೇಶವು ಬೆಳೆಯುತ್ತಿರುವುದರಿಂದ ಕಾಡು ಪ್ರಾಣಿಗಳು ಜನ ವಾಸಿಸುತ್ತಿರುವ ಜಾಗಗಳಿಗೆ ಬರುತ್ತಿದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply