ಮಂಡ್ಯ: ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆಯೊಂದು ತೋಟವೊಂದರ ತೆಂಗಿನ ಮರವನ್ನು ಏರಿ ಕುಳಿತ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ನಡೆದಿದೆ.
ಸೋಮನಾಥಪುರದ ಯೋಗೇಶ್ ಎಂಬುವರ ತೋಟದಲ್ಲಿ ಚಿರತೆ ತೆಂಗಿನ ಮರ ಏರಿ ಕುಳಿತಿದೆ. ಸುಮಾರು 30-35 ಅಡಿ ಎತ್ತರದ ತೆಂಗಿನ ಮರವನ್ನು ಚಿರತೆ ಏರಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸುತ್ತಮುತ್ತಲ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.

ಮರದಿಂದ ಕೆಳಗೆ ಬರಲಾಗದೇ ಚಿರತೆ ನರಳಾಡುತ್ತ ಕೂಗುತ್ತಿತ್ತು. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ಚಿರತೆ ಭಯಗೊಂಡು ಮರದ ಮೇಲೆಯೇ ಕುಳಿತಿತ್ತು. ಚಿರತೆಯನ್ನು ಕೆಳಗಿಳಿಸಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾಗ ಚಿರತೆಗೆ ಮರದಿಂದ ಕೆಳಗಡೆ ಇಳಿದು ಓಡಿ ಹೋಗಿದೆ.
ಈ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದವು. ಆದ್ರೆ ಈ ಬಾರಿ ಕಂಡುಬಂದಿರುವ ಮೊದಲ ಚಿರತೆ ಇದು ಎಂದು ಸ್ಥಳೀಯರು ಹೇಳಿದ್ದಾರೆ. ಕೆ.ಆರ್.ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ಪ್ರತ್ಯಕ್ಷದಿಂದ ಸೋಮನಾಥಪುರವಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮಸ್ಥರು ಕೂಡ ಆತಂಕಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply