ಎದ್ದು ನಿಂತು ಚಪ್ಪಾಳೆ- ವಿಮಾನದೊಳಗೆ ಅಭಿ ಪೋಷಕರಿಗೆ ಗೌರವದ ಆಹ್ವಾನ

ನವದೆಹಲಿ: ಪಾಕಿಸ್ತಾನ ತನ್ನ ವಶದಲ್ಲಿಟ್ಟುಕೊಂಡಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಪೋಷಕರು ಅಮೃತಸರದ ವಾಘಾ ಗಡಿಗೆ ತೆರಳಿದ್ದಾರೆ.

ಹೆಮ್ಮೆಯ ಪುತ್ರ ಅಭಿನಂದನ್ ಬರುತ್ತಿರುವ ಮಾಹಿತಿ ತಿಳಿದ ತಕ್ಷಣ ಅವರ ತಂದೆ ನಿವೃತ್ತ ಏರ್‍ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್ ಮತ್ತು ತಾಯಿ ಶೋಭಾ ವರ್ಥಮಾನ್ ಅವರು ಗುರುವಾರ ರಾತ್ರಿ ಚೆನ್ನೈನಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ:ಭಾರತೀಯರಿಗೆ ಅಭಿನಂದನ್ ತಂದೆ ಧನ್ಯವಾದ

ಅಭಿನಂದನ್ ಪೋಷಕರು ವಿಮಾನದ ಒಳಗೆ ಪ್ರವೇಶ ಮಾಡುತ್ತಿದ್ದಂತೆಯೇ ಅದರೊಳಗಿದ್ದ ಸಹ ಪ್ರಯಾಣಿಕರು ಹರ್ಷೋದ್ಗಾರ ಕೂಗಿದ್ದು, ಅಲ್ಲದೇ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬರಮಾಡಿಕೊಂಡಿದ್ದರು. ಮಧ್ಯರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಏರ್ ಪೋರ್ಟ್ ನಲ್ಲಿಯೂ ಕೂಡ ಸೇನೆಯವರು ಅವರನ್ನು ಗೌರವದಿಂದ ಸ್ವಾಗತಿಸಿದ್ದಾರೆ.

ಈ ವೇಳೆ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಥಮಾನ್, “ಮೊದಲು ನನ್ನ ಮಗನನ್ನು ನೋಡಬೇಕು, ಆಮೇಲಷ್ಟೇ ಪ್ರತಿಕ್ರಿಯೆ ಕೊಡ್ತೇನೆ” ಎಂದು ಹೇಳಿದ್ದಾರೆ. ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಆಗಿದ್ದು, ತಾಯಿ ಶೋಭಾ ವರ್ಥಮಾನ್ ವೈದ್ಯರಾಗಿದ್ದಾರೆ. ಪೋಷಕರು ದೆಹಲಿಗೆ ಬಂದು ಇಳಿದ ಕೂಡಲೇ ಅಮೃತಸರಕ್ಕೆ ತೆರಳಿದ್ದಾರೆ.

ಪಾಕಿಸ್ತಾನವು ವಾಘಾ ಗಡಿಯಲ್ಲಿ ಇಂದು ಮಧ್ಯಾಹ್ನದ ಬಳಿಕ 3.30ರ ಸುಮಾರಿಗೆ ಅಭಿನಂದನ್ ಅವರನ್ನು ಭಾರತಕ್ಕೆ ಒಪ್ಪಿಸುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಭಾರತೀಯರ ಸಂಭ್ರಮ ಮುಗಿಲುಮುಟ್ಟಿದೆ. ಅಲ್ಲದೇ ವಾಘಾ ಗಡಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೆಮ್ಮೆಯ ಸೈನಿಕ ಅಭಿಯನ್ನು ಅದ್ಧೂರಿಯಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *