ಚಾರ್ಮಾಡಿಯಲ್ಲಿ ಸಂಚಾರ ಬಂದ್- ಕುದುರೆಮುಖ ಸಂಚಾರ ನಿರ್ಬಂಧ ತೆರವು

ಚಿಕ್ಕಮಗಳೂರು: ರಾತ್ರಿ ಒಂಬತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಸಂಚಾರಕ್ಕೆ ನಿರ್ಬಂಧವಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖ ಮಾರ್ಗದಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಶಿರಾಡಿ ಘಾಟ್ ಬಂದ್ ಆದ ಮೇಲೆ ಕಳೆದ 4 ತಿಂಗಳಿನಿಂದ ಕುದುರೆಮುಖದಿಂದ ಮಂಗಳೂರಿಗೆ ಹೋಗುವ ಭಾರೀ ವಾಹನಗಳು ಹಾಗೂ ಇತರೇ ವಾಹನಗಳು ಮಾರ್ಗದಲ್ಲಿ ರಾತ್ರಿ ಪಾಳಯದಲ್ಲೂ ಸಂಚರಿಸಲು ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದರೆ ಕುದುರೆಮುಖ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ 45 ನಿಮಿಷಗಳ ಕಾಲ ಸಮಯದ ಮಿತಿಯನ್ನು ಹೇರಲಾಗಿತ್ತು. ಅಷ್ಟರಲ್ಲಿ ವಾಹನಗಳು ಕುದುರೆಮುಖದಿಂದ ಮಂಗಳೂರಿನ ಗಡಿ ಮುಟ್ಟಬೇಕಿತ್ತು.

ಈಗ ಚಾರ್ಮಾಡಿಯಲ್ಲಿ ಸಮಸ್ಯೆ ಆಗಿರುವ 45 ನಿಮಿಷಗಳವರೆಗಿನ ನಿರ್ಬಂಧವನ್ನು ತೆರೆಯಲಾಗಿದೆ. ದಿನದ 24 ಗಂಟೆಯೂ ಯಾವಾಗ ಬೇಕಾದರು, ಯಾವ ವಾಹನ ಬೇಕಾದರು ಈ ಮಾರ್ಗದಲ್ಲಿ ಯಾವುದೇ ಟೈಂ ಲಿಮಿಟ್ ಇಲ್ಲದೆ ಸಾಗಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗಬೇಕಾದ ಪ್ರವಾಸಿಗರು ಮೂಡಿಗೆರೆ, ಕಳಸ ಮಾರ್ಗವಾಗಿ ಕುದುರೆಮುಖದಿಂದ ಮಂಗಳೂರು ತಲುಪಬಹುದು.

ಕುದುರೆಮುಖ ರಸ್ತೆಯಲ್ಲಿ ಕಾಡು ಪ್ರಾಣಿಗಳ ಹತ್ಯೆ ನಡೆಯುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ 45 ನಿಮಿಷಗಳ ಕಾಲ ಸಮಯದ ಮಿತಿಯನ್ನು ವಿಧಿಸಿತ್ತು.

ಇಂದು, ನಾಳೆ ಬಂದ್: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಭೂಕುಸಿತ ಆಗಿದ್ದರಿಂದ ಎರಡೂ ಕಡೆಯಿಂದ ವಾಹನ ಸಂಚಾರ ಬಂದ್ ಆಗಿತ್ತು. ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಎಲ್ಲಾ ವಾಹನಗಳು ಸುಮಾರು ಮೂರು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಲ್ಲಿಯೇ ಸಿಲುಕಿಕೊಂಡಿದ್ದವು. ಚಾರ್ಮಾಡಿ ಘಾಟ್ ಭೂಕುಸಿತ ಹಿನ್ನೆಲೆ ಸದ್ಯ ಕಾಮಗಾರಿ ಮುಂದುವರಿಕೆಗೆ ಅವಕಾಶ ಕೇಳಿದ ಅಧಿಕಾರಿಗಳು ಮತ್ತೆರಡು ದಿನ ಚಾರ್ಮಾಡಿ ಘಾಟ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಬುಧವಾರ ಮತ್ತು ಗುರುವಾರ ಈ ರಸ್ತೆ ಬಂದ್ ಆಗಲಿದೆ.

ಮಳೆಯಿಂದ ಮತ್ತಷ್ಟು ಮರ, ಗುಡ್ಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಮಗೆ 48 ಗಂಟೆಗೆ ಸಮಯ ಕೊಡಿ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತದ ನೆರವಿಂದ ಎಲ್ಲವನ್ನೂ ತೆರವುಗೊಳಿಸ್ತೇವೆ ಎಂದು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *