ವಾಹಿನಿಯ ಮುಖ್ಯಸ್ಥ ಅನುಮಾನಾಸ್ಪದ ಸಾವು – ಮಹಿಳೆ ಮೇಲೆ ಅನುಮಾನ

ಉಡುಪಿ: ಹೊಸ ವರ್ಷ ಆಚರಣೆ ವೇಳೆ ಮದ್ಯ ಸೇವಿಸಿದ ಉಡುಪಿಯ ಮಣಿಪಾಲದಲ್ಲಿ ಉದ್ಯಮಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಜೊತೆಗಿರುವ ಮಹಿಳೆ ಮೇಲೆ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಈ ಬಗ್ಗೆ ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ.

ರೋಹಿತ್ ರಾಜ್ ಸುವರ್ಣ ಅನುಮಾನಾಸ್ಪದವಾಗಿ ಮೃತಪಟ್ಟ ಉದ್ಯಮಿ. ಮಂಗಳೂರು ಎನ್‍ಎಂಸಿ ಕೇಬಲ್ ನ ಮುಖ್ಯಸ್ಥರಾಗಿದ್ದ ರೋಹಿತ್ 25 ವರ್ಷಗಳ ಹಿಂದೆ ಕೇಬಲ್ ಮೂಲಕ ಸುದ್ದಿವಾಹಿನಿ ಆರಂಭಿಸಿರುವ ಖ್ಯಾತಿಯೂ ಇವರಿಗಿದೆ. ಜೊತೆಗೆ ಹಲವಾರು ಬಿಸಿನೆಸ್ ಮಾಡಿಕೊಂಡಿರುವ ರೋಹಿತ್ ಉಡುಪಿಯ ಓಷ್ಯನ್ ಪರ್ಲ್ ಹೋಟೆಲ್‍ನಲ್ಲಿ ಮಹಿಳೆಯ ಜೊತೆ ಬಂದು ಪಾರ್ಟಿ ಮಾಡುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು.

ಪಾರ್ಟಿಯಲ್ಲಿ ರೋಹಿತ್ ಕುಡಿದಿದ್ದಾರೆ. ಅವರ ಜೊತೆಗಿದ್ದ ಮಹಿಳೆಯೂ ಗಂಟಲು ಮಟ್ಟದವರೆಗೆ ಕುಡಿದು ತೂರಾಡಿದ್ದಾಳೆ. ಅದೇ ನಶೆಯಲ್ಲಿ ಉಡುಪಿಯಿಂದ ಮಣಿಪಾಲದ ರಾಯಲ್ ಎಂಬೆಸಿ ಅಪಾರ್ಟ್ ಮೆಂಟ್‍ಗೆ ತೆರಳಿದ್ದಾರೆ. ರೋಹಿತ್ ಪಾಲಿಗೆ ಅದೇ ಕೊನೆಯ ಪಾರ್ಟಿ ಆಗಿದೆ. ಅಪಾರ್ಟ್ ಮೆಂಟ್‍ನಲ್ಲಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದೆ. ಗುಂಡಿನ ಮತ್ತಿನಲ್ಲಿ ಇಬ್ಬರು ಹೊಡೆದಾಟ ಶುರು ಮಾಡಿದ್ದರು. ನಂತರ ಬೆಳಗ್ಗೆ ಆಗುವುದರೊಳಗೆ ರೋಹಿತ್ ಹೆಣವಾಗಿದ್ದಾರೆ.

ಮಣಿಪಾಲ ಪೊಲೀಸರಿಗೆ ಬೆಳಗ್ಗಿನ ಜಾವ ಮಾಹಿತಿ ಸಿಕ್ಕಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಠಡಿಯಲ್ಲಿ ಬಟ್ಟೆಯೊಂದು ಫ್ಯಾನಿಗೆ ನೇತು ಹಾಕಿದ್ದನು ಪೊಲೀಸರು ಕಂಡಿದ್ದಾರೆ. ಅಲ್ಲದೆ ಮೃತದೇಹ ನೆಲದ ಮೇಲೆ ಬಿದ್ದಿರುವುದನ್ನು ನೋಡಿದ್ದಾರೆ. ನಂತರ ಪೊಲೀಸರು ಮೃತದೇಹವನ್ನು ಮಣಿಪಾಲ ಕೆಎಂಸಿಯ ಶವಾಗಾರಕ್ಕೆ ರವಾನಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ. ವಿಧಿ ವಿಜ್ಞಾನ ವೈದ್ಯರಿಗೆ ರೋಹಿತ್ ಮೃತದೇಹದ ತಲೆ ಮತ್ತು ಎದೆ ಭಾಗದಲ್ಲಿ ಗಾಯ ಕಾಣಿಸಿದೆ. ಸಂಶಯ ಬಂದು ಘಟನಾ ಸ್ಥಳದ ಎಲ್ಲಾ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರು ಜೊತೆಗಿದ್ದ ಮಹಿಳೆಯ ಮೇಲೆ ಸಂಶಯಪಟ್ಟಿದ್ದಾರೆ.

ಈ ಬಗ್ಗೆ ರೋಹಿತ್ ಸ್ನೇಹಿತ ರಹೀಂ ಉಚ್ಚಿಲ ಮಾತನಾಡಿ, ರೋಹಿತ್ ಹಾಗೂ ನಮ್ಮ ಗೆಳೆತನ ಬಹಳ ಹಳೆಯದು. 25 ವರ್ಷದ ಹಿಂದೆ ಕೇಬಲ್ ಮೂಲಕ ಚಾನೆಲ್ ಆರಂಭಿಸಿದವರು. ಅವರು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಬಿಂದಾಸ್ ಜೀವನ ನಡೆಸುವವರು. ಹೀಗ್ಯಾಕೆ ಆಯ್ತು ಎಂದು ಗೊತ್ತಾಗುತ್ತಿಲ್ಲ. ಮಣಿಪಾಲ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಹೋದರಿ ಸುಜಾತಾ ಅವರು ಕೂಡ ಮಾತನಾಡಿ, ರೋಹಿತ್ ರಾಜ್ ನೇಣು ಬಿಗಿದು ಸಾವಿಗೀಡಾಗಿಲ್ಲ. ಜೊತೆಗಿರುವ ಮಹಿಳೆ ಯಾರು ಎಂಬುದು ಸಂಶಯ ಹುಟ್ಟಿಸುತ್ತಿದೆ. ಪೊಲೀಸರು ಆಕೆಯನ್ನು ವಿಚಾರಿಸಿದರೆ ಸತ್ಯ ಹೊರಗೆ ಬರಲಿದೆ ಎಂದರು.

Comments

Leave a Reply

Your email address will not be published. Required fields are marked *