17 ಕೆರೆ ತುಂಬಿಸಿದವ್ರನ್ನ ಭಗೀರಥ ಅನ್ನೋದಾದ್ರೆ 107 ಕೆರೆ ತುಂಬಿಸಿದ ನನ್ನನ್ನು ಏನಂತೀರಿ? – ಹೆಚ್‌ಡಿಕೆ

– ನಾವು ಭಗೀರಥರು ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದೇವೆಯೇ?

ರಾಮನಗರ: ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾದರೆ, 107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದಲ್ಲಿ (Channapatna) ಕಾಂಗ್ರೆಸ್‌ನಿಂದ (Congress) ಜೆಡಿಎಸ್ ಸೇರಿದ ಮುಖಂಡರನ್ನು ಬರಮಾಡಿಕೊಂಡ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಮುಖ್ಯಮಂತ್ರಿಯಾಗಿ ಹಾಗೂ ಐದು ವರ್ಷ ಚನ್ನಪಟ್ಟಣ ಶಾಸಕನಾಗಿ ನಾನು 107 ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಅವರದೇ ಸರ್ಕಾರ ಇದೆ, ಕಡತಗಳನ್ನು ತೆಗೆದು ನೋಡಲಿ. ನಾನು 17 ಕೆರೆಗಳಿಗೆ ನೀರು ತುಂಬಿಸಿದೆ ಎಂದು ಹೇಳುತ್ತಾರೆ. 107 ಕೆರೆಗಳಿಗೆ ನೀರು ತುಬಿಸಿದ್ದನ್ನು ಇವರು ಯಾಕೆ ಮರೆಮಾಚುತ್ತಾರೆ? ನಿಜ ಹೇಳುವುದಕ್ಕೆ ಏನಾಗಿದೆ ಅವರಿಗೆ? ಕಡತ ಇಲ್ಲವೇ? ಆದೇಶಗಳು ಇಲ್ಲವೇ? ತೆರೆದು ನೋಡಲಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.

ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸದಿದ್ದರೆ ಇವರು 17 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ ಆಗುತ್ತಿತ್ತಾ? ಇವತ್ತು ಚನ್ನಪಟ್ಟಣ, ರಾಮನಗರ ತಾಲ್ಲೂಕಿನ ಜನರಿಗೆ ಆ ಜಲಾಶಯ ಜೀವನಾಧಾರವಾಗಿದೆ. ಅದನ್ನೇಕೆ ಇವರು ಹೇಳುವುದಿಲ್ಲ? ಹಾಗಾದರೆ ಒಂದು ಬೃಹತ್ ಜಲಾಶಯವನ್ನೇ ಕಟ್ಟಿಸಿದ ದೇವೇಗೌಡರನ್ನು ಏನೆಂದು ಕರೆಯಬೇಕು? 107 ಕೆರೆಗಳಿಗೆ ನೀರು ತುಂಬಿಸಿದ ನನ್ನನ್ನು ಏನೆಂದು ಕರೆಯಬೇಕು? ನಾವು ಭಗೀರಥರು ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದೇವೆಯೇ ಎಂದು ಸಿ.ಪಿ ಯೋಗೇಶ್ವರ್‌ಗೆ ತಿರುಗೇಟು ನೀಡಿದ್ದಾರೆ.

ಚನ್ನಪಟ್ಟಣ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಂಸದ ಸುರೇಶ್ ಸವಾಲಿನ ವಿಚಾರಕ್ಕೆ, ಚನ್ನಪಟ್ಟಣಕ್ಕೆ ಸುರೇಶ್ ಕೊಡುಗೆ ಏನು? ದಿನವೂ ರಾತ್ರಿ ಮತ್ತಿಕೆರೆ ಹತ್ತಿರ ಲೋಡುಗಟ್ಟಲೇ ಕಲ್ಲು ಬರುತ್ತೇ, ಹೊರದೇಶಕ್ಕೆ ಕಳಿಸುವುದಕ್ಕೆ ಅದೇ ಅವರ ಕೊಡುಗೆ. ಅಂತಹವರ ಜೊತೆ ನಾನು ಬಹಿರಂಗ ಚರ್ಚೆಗೆ ಬರಬೇಕಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕರ ವಿಚಾರಕ್ಕೆ, ಅವರಿಗೆ ಕಣ್ಣೀರೇ ಬರುವುದಿಲ್ಲವೇ? ಕಣ್ಣೀರು ಬರದಿದ್ದರೆ ಅವರು ಮನುಷ್ಯರೇ ಅಲ್ಲ. ಮನುಷ್ಯತ್ವ ಇರುವವರಿಗೆ ಮಾತ್ರ ಕಣ್ಣೀರು ಬರುತ್ತದೆ ಎಂದಿದ್ದಾರೆ.