ವಾಹನ ಚಾಲನೆ ವೇಳೆ ಜಾಗೃತರಾಗಿರಿ: ಅಭಿಮಾನಿಗಳಲ್ಲಿ ದಚ್ಚು ಮನವಿ

ಬೆಂಗಳೂರು: ವಾಹನ ಚಾಲನೆ ವೇಳೆ ಜಾಗೃತರಾಗಿರಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ದಚ್ಚು ಮನವಿ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಪುತ್ರ ವಿನೀಶ್ ಹುಟ್ಟುಹಬ್ಬದಂದು ಅಭಿಮಾನಿಯೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಈ ಘಟನೆಯನ್ನು ನೆನೆದು ದಚ್ಚು ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಟ್ವೀಟ್ ಮಾಡಿರುವ ದರ್ಶನ್, ಅಭಿಮಾನಿಗಳಲ್ಲಿ ಕಳಕಳಿಯ ಮನವಿ. ವಾಹನವನ್ನು ಚಲಿಸುವಾಗ ದಯಮಾಡಿ ಅತಿ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ. ಈ ವರ್ಷವೂ ಹುಟ್ಟುಹಬ್ಬಕ್ಕೆ ಬರುವವರು ದಯಮಾಡಿ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಆಗಿದ್ದೇನು?:
ಮಧುಗಿರಿಯ ಬೆಂಕಿಪುರದ ನಿವಾಸಿ ರಾಕೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಟ್ಟಾ ಅಭಿಯಾನಿಯಾಗಿದ್ದ. ಹೀಗಾಗಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಬೈಕಿನಲ್ಲಿ ದರ್ಶನ್ ಪುತ್ರ ವಿನೀಶ್‍ಗೆ ಜನ್ಮದಿನದ ಶುಭಕೋರಲು ಬುಧವಾರ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ. ವಿನೀಶ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿ ಶುಭ ಕೋರಿದ್ದ ರಾಕೇಶ್ ಮತ್ತು ಕಾರ್ತಿಕ್ ಬೈಕಿನಲ್ಲಿ ಗ್ರಾಮಕ್ಕೆ ಮರಳುತ್ತಿದ್ದರು. ಕಾರ್ತಿಕ್ ಬೈಕ್ ಚಲಾಯಿಸುತ್ತಿದ್ದರೆ ರಾಕೇಶ್ ಹಿಂಬದಿಯಲ್ಲಿ ಕುಳಿತಿದ್ದ. ತುಮಕೂರು-ಕೊರಟಗೆರೆ ಮುಖ್ಯರಸ್ತೆಯ ಮುಗ್ಗೊಂಡನಹಳ್ಳಿ ಬಳಿ ಬೈಕ್ ಬರುತ್ತಿದ್ದಂತೆ, ಕಾರ್ತಿಕ್ ತಳ್ಳೋಗಾಡಿಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ರಾಕೇಶ್ ಬೈಕ್‍ನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದ. ಸವಾರ ಕಾರ್ತಿಕ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು.

ಈ ಸುದ್ದಿ ಕೇಳಿ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಯ ಸಾವಿಗೆ ಸಂತಾಪ ಸೂಚಿಸಿದ್ದರು. ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “2018ರ ಅಕ್ಟೋಬರ್ 31ರಂದು ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಕೇಳಿ ತುಂಬಾ ಬೇಸರವಾಗಿದೆ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಎಂದೂ ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ” ಎಂದು ಪೋಸ್ಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *