ಆರ್ಥಿಕ ವಿಪತ್ತು ಮರೆಮಾಚಲು ಚಂದ್ರಯಾನ-2 ಬಳಕೆ: ಮಮತಾ ಬ್ಯಾನರ್ಜಿ

ಕೊಲ್ಕತಾ: ದೇಶಕ್ಕೆ ಎದುರಾಗಿರುವ ಆರ್ಥಿಕ ವಿಪತ್ತನ್ನು ಮರೆ ಮಾಚಲು, ಜನರ ಚಿತ್ತವನ್ನು ಚಂದ್ರಯಾನದ ಕಡೆ ಸೆಳೆಯುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಬಂಗಾಳ ವಿಧಾನಸಭೆಯಲ್ಲಿ ಎನ್‍ಆರ್ ಸಿ ವಿರುದ್ಧ ನಿರ್ಣಯ ಕೈಗೊಳ್ಳುವ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಚಂದ್ರಯಾನ-2 ಇದೇ ಮೊದಲೇ, ಬಿಜೆಪಿಯವರು ಅಧಿಕಾರಕ್ಕೆ ಬರುವ ಮೊದಲು ನಾವು ಇಂತಹ ಪ್ರಯತ್ನ ಮಾಡಿರಲಿಲ್ಲವೇ, ಇವರೇ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೆರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ದ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.

ಈ ಹಿಂದೆ ಚಂದ್ರಯಾನ-1 ಮೂಲಕ ಮೊದಲ ಬಾರಿಗೆ ಭಾರತ ಚಂದ್ರಯಾನವನ್ನು ಆರಂಭಿಸಿತ್ತು. ಚಂದ್ರಯಾನ-1, 312 ದಿನಗಳ ಕಾರ್ಯಾಚರಣೆಯಾಗಿತ್ತು. ಆಗಸ್ಟ್ 29, 2009ರಲ್ಲಿ ಚಂದ್ರಯಾನ-1ನ್ನು ಉಡಾವಣೆ ಮಾಡಲಾಗಿತ್ತು.

ಬಹು ನಿರೀಕ್ಷಿತ ಚಂದ್ರಯಾನ-2ನ ‘ವಿಕ್ರಮ್’ ರಾತ್ರಿ ಸುಮಾರು 1.30ರ ಹೊತ್ತಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ. ಈ ಕುತೂಹಲ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಶಾಲಾ ಮಕ್ಕಳೊಂದಿಗೆ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಲಿದ್ದಾರೆ.

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು ‘ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಈವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

ಪ್ರಧಾನಿ ನರೇಂದ್ರ ಮೋದಿ ಸಹ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿ ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.

Comments

Leave a Reply

Your email address will not be published. Required fields are marked *