ಬಿಗ್ ಬಾಸ್ ಗೆದ್ದ ನಂತರ ಮೊದಲ ಬಾರಿ ತವರೂರಿಗೆ ಭೇಟಿ ನೀಡಿದ ಚಂದನ್ ಶೆಟ್ಟಿ

ಹಾಸನ: ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಸೋಮವಾರ ಹಾಸನಕ್ಕೆ ಭೇಟಿ ನೀಡಿದರು. ಬಿಗ್ ಬಾಸ್ ನಲ್ಲಿ ವಿನ್ನರ್ ಆದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆಗೆ ಬಂದ ಚಂದನ್ ಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಅಭಿಮಾನಿಗಳು ಮತ್ತು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿ ಚಂದನ್ ಶೆಟ್ಟಿ ಗೆ ಸ್ವಾಗತ ಕೋರಿದರು. ನಗರದ ಬಿಎಂ ರಸ್ತೆ, ಬಸ್ ಸ್ಟಾಂಡ್ ರಸ್ತೆ, ಎ.ವಿ.ಕೆ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.

ನಂತರ ಹೇಮಾವತಿ ಪ್ರತಿಮೆ ಬಳಿ ಚಂದನ್ ಮಾತನಾಡಿ, ಬಿಗ್ ಬಾಸ್ ಗೆಲುವಿನ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದು ನನಗೆ ಸಂತಸ ತಂದಿದೆ ಎಂದು ಹೇಳಿದರು.

ಕನ್ನಡ ನಾಡಿನಲ್ಲಿ `ಮೂರೇ ಮೂರು ಪೆಗ್ಗಿಗೆ’ ಹಾಡಿನ ಮೂಲಕ ಫೀನಿಕ್ಸ್ ನಂತೆ ಎದ್ದು ಬಂದ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದರು. ವಿನ್ ಆದರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸುತ್ತೀನಿ ಎಂದು ನುಡಿದಿದ್ದ ಚಂದನ್ ಶೆಟ್ಟಿಗೆ, ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ.

ಚಂದನ್ ಶೆಟ್ಟಿ ಮೂಲತಃ ಹಾಸನದ ಶಾಂತಿಗ್ರಾಮದವರು. ಅವರ ತಂದೆ ಪರಮೇಶ್ ಹಾಗೂ ತಾಯಿ ಪ್ರೇಮಾ. ಚಂದನ್ ಶೆಟ್ಟಿಗೆ ಓರ್ವ ತಮ್ಮನಿದ್ದಾನೆ. ಚಂದನ್ ಸಾಹಿತ್ಯ ಬರಹಗಾರರಾಗಿದ್ದು, ಅಲೆಮಾರಿ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ವರದನಾಯಕ, ಚಕ್ರವ್ಯೂಹ ಹಾಗೂ ಭಜರಂಗಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಚಿತ್ರಕ್ಕೆ ಸಾಹಿತ್ಯ ಬರೆದು ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟಕೀಲಾ ಹಾಡು ಯೂಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯವಾಗಿದೆ.

Comments

Leave a Reply

Your email address will not be published. Required fields are marked *