ಮೀಟರ್ ಬಡ್ಡಿ ದಂಧೆಗೆ ವ್ಯಕ್ತಿ ಬಲಿ- ದೂರು ಕೊಟ್ರೂ ಆರೋಪಿಗಳ ವಿರುದ್ಧ ಕ್ರಮವಿಲ್ಲ ಅಂತ ಪತ್ನಿ ಕಣ್ಣೀರು

ಚಾಮರಾಜನಗರ: ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಗೆ ಹಲವು ಹೆಣಗಳು ಉರುಳಿವೆಯಾದ್ರೂ ಇನ್ನೂ ಬ್ರೇಕ್ ಬಿದ್ದಿಲ್ಲ. ಇದೀಗ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಮೀಟರ್ ಬಡ್ಡಿ ದಂಧೆಗೆ ಓರ್ವ ಬಲಿಯಾಗಿದ್ದಾನೆ.

ಇಲ್ಲಿನ ಈದ್ಗಾ ಮೊಹಲ್ಲಾ ನಿವಾಸಿ ಅಫ್ಸರ್ ಆಲಿ ಎಂಬಾತ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ತಾಳಲಾರದೇ ಜುಲೈ19 ರಂದು ಮಂಡ್ಯ ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೆ ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಕರೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾನೆ.

ಇದು ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಆತ್ಮಹತ್ಯೆ ಮಾಡಿಕೊಂಡ ಬಳಿಕ ಮನೆಯವರು ಅಲ್ಲಿಗೆ ಧಾವಿಸಿ ಮಂಡ್ಯ ಜಿಲ್ಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಎಜಾಸ್ ಹಾಗು ಅಲ್ಲಾಭಕ್ಷ ಎಂಬ ಬಡ್ದಿ ದಂಧೆಕೋರರ ವಿರುದ್ದ ಸಾಕ್ಷಿ ಸಮೇತ ಅಂದೇ ದೂರುಕೊಟ್ಟಿದ್ದಾರೆ. ದೂರು ಕೊಟ್ಟು ಹದಿನೈದು ದಿನಕಳೆದ್ರೂ ಅರೆಕೆರೆ ಪೊಲೀಸರು ಗುಂಡ್ಲುಪೇಟೆಗೆ ಬಂದು ವಿಚಾರಣೆ ಸಹ ನಡೆಸಿಲ್ಲ. ಅಲ್ಲದೇ ಆರೋಪಿಗಳ ವಿರುದ್ಧ ಯಾವುದೇ ಕ್ರಮನೂ ಕೈಗೊಂಡಿಲ್ಲ. ಹಾಗಾಗಿ ಮೃತ ಅಫ್ಸರ್ ಆಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಈಗ ದಿಕ್ಕು ತೋಚದೆ ಕಣ್ಣೀರುಡುತ್ತಿದ್ದಾರೆ.

ಏನಿದು ಮೀಟರ್ ಬಡ್ಡಿ ದಂಧೆ?: ಬಡ್ಡಿ ದಂಧೆಕೋರರು ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಸಾಲ ನೀಡಿ ತಮಗಿಷ್ಟ ಬಂದ ಹಾಗೆ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇವರ ಬಳಿ ಸಾಲ ತೆಗೆದುಕೊಂಡರೆ 1 ಲಕ್ಷ ರೂಪಾಯಿಗೆ ವಾರಕ್ಕೆ 10ಸಾವಿರ ರೂಪಾಯಿ ಬಡ್ಡೀನೆ ಕಟ್ಟಬೇಕಂತೆ. ಅಲ್ಲಿಗೆ ತಿಂಗಳಿಗೆ 40 ಸಾವಿರ ರೂಪಾಯಿಯಂತೆ ವರ್ಷಕ್ಕೆ 4 ಲಕ್ಷದ 80 ಸಾವಿರ ರೂಪಾಯಿ ಬಡ್ಡೀನೆ ಆಗುತ್ತೆ. ವಾರಕ್ಕೊಮ್ಮೆ ಬಡ್ಡಿ ಕಟ್ಟಿಲ್ಲವೆಂದರೆ ಸಾಲಪಡೆದವರ ಮಾನಮರ್ಯಾದೆ ಎಲ್ಲ ಹರಾಜು ಹಾಕಿ ಇನ್ನಿಲ್ಲದ ಕಿರುಕುಳ ನೀಡ್ತಾರೆ.

Comments

Leave a Reply

Your email address will not be published. Required fields are marked *