ಪೊಲೀಸ್ ಕ್ರೀಡಾಕೂಟ – ರಿಲ್ಯಾಕ್ಸ್ ಮೂಡ್‍ನಲ್ಲಿ ಆಟವಾಡಿದ ಆರಕ್ಷಕರು

ಚಾಮರಾಜನಗರ: ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ಮಗ್ನರಾಗುವ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿ ಒತ್ತಡಕ್ಕೆ ಸಿಲುಕಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಅದರಿಂದ ಸ್ವಲ್ಪ ರಿಲ್ಯಾಕ್ಸ್ ಮಾಡಲು ಪರ್ಯಾಯ ದಾರಿ ಹುಡುಕಿಕೊಳ್ಳಬೇಕು. ಹಾಗೆ ಗಡಿ ಜಿಲ್ಲೆ ಚಾಮರಾಜನಗರದ ಪೊಲೀಸರು ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಸ್ವಲ್ಪ ರಿಲ್ಯಾಕ್ಸ್ ಮೂಡ್ ಗೆ ತೆರಳಿದ್ದರು.

ಗಡಿ ಜಿಲ್ಲೆ ಚಾಮರಾಜನಗರದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಇಂದು ಆರಂಭವಾಯಿತು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆರಂಭಗೊಂಡ ಕ್ರೀಡಾಕೂಟಕ್ಕೆ ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ವಿ. ಪಾಟೀಲ್ ಗುಂಡು ಎಸೆಯುವ ಮೂಲಕ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಮೊದಲು ವಿವಿಧ ಪೊಲೀಸ್ ತುಕಡಿಗಳಿಂದ ಪಥ ಸಂಚಲನದ ಮೂಲಕ ಗೌರವ ವಂದನೆ ಸ್ವೀಕರಿಸಿದರು.

ಪೊಲೀಸ್ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದ ಜಿಲ್ಲಾ ನ್ಯಾಯಾಧೀಶರು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ನಾವು ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೆ ಮಾನಸಿಕ ಸಾಮರ್ಥ್ಯ ಎಷ್ಟು ಮುಖ್ಯವೋ ದೈಹಿಕ ಸಾಮರ್ಥ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾಗಿ ಕ್ರೀಡಾ ಚಟುವಟಿಕೆಗಳ ಮೂಲಕ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ಎಎಸ್ಪಿ ಅನಿತಾ ಹದ್ದಣ್ಣನವರ್ ಸೇರಿದಂತೆ ಜಿಲ್ಲೆಯ ವಿವಿಧ ಠಾಣಾಧಿಕಾರಿಗಳು ಪ್ರತಿಯೊಬ್ಬರು ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *