ಬೈಕ್ ಕದ್ದು ಬೇರೆಡೆ ಮಾರುತ್ತಿದ್ದ ಮೂವರು ಅರೆಸ್ಟ್- 9 ಬೈಕ್ ವಶ

ಚಾಮರಾಜನಗರ: ಬೈಕ್ ಕದ್ದು ಬೇರೆಡೆ ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಚಾಮರಾಜನಗರ ಪೊಲೀಸರು ಬಂಧಿಸಿದೆ.

ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಫಯಾಜ್, ಸೈಯ್ಯದ್ ಹಾಗೂ ಇನಾಯತ್ ಪಾಷಾ ಬಂಧಿತ ಆರೋಪಿಗಳು. ಬಂಧಿತರಿಂದ 3.26 ಲಕ್ಷ ರೂ. ಮೌಲ್ಯದ 9 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್‍ಪಿ ಎಚ್.ಡಿ.ಆನಂದಕುಮಾರ್, ಪಟ್ಟಣದ ದೊಡ್ಡಮಸೀದಿ ಮುಂಭಾಗ, ಕಾರ್ತಿಕ್ ಬಾರ್, ವೆಂಕಟೇಶ್ವರ ಮಹಲ್, ಶ್ರೀನಿವಾಸ್ ಟಾಕೀಸ್, ಸರೋಜಾ ಬಾರ್ ಆ್ಯಂಡ್ ರೆಸ್ಟೋರೆಂಟ್, ಅಚ್ಗಾಳ್ ಸರ್ಕಲ್ ಹಾಗೂ ಎಂಜಿಎಸ್‍ವಿ ಕಾಲೇಜು ಮೈದಾನದಲ್ಲಿ ಈ ವರ್ಷ ಕಳುವಾಗಿದ್ದ ಬೈಕ್‍ಗಳ ಪತ್ತೆಗೆ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು. ಈ ವೇಳೆ ಕಾರ್ಯ ಪ್ರವೃತ್ತರಾದ ಸಬ್‌ಇನ್ಸ್‌ಪೆಕ್ಟರ್‌ ಜೆ.ರಾಜೇಂದ್ರ ಹಾಗೂ ಪಟ್ಟಣ ಠಾಣೆಯ ಕ್ರೈಂ ಪೊಲೀಸ್ ತಂಡದೊಂದಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ಇಲಾಖೆ ಪರವಾಗಿ ಪ್ರಶಂಸಿಸುತ್ತೇನೆ ಎಂದು ತಿಳಿಸಿದರು.

ಬಂಧಿತ ಆರೋಪಿಗಳು ಪಟ್ಟಣದಲ್ಲಿ ಕಳವು ಮಾಡಿದ ಬೈಕ್‍ಗಳನ್ನು ತಮಿಳುನಾಡು ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮಾರಾಟ ಮಾಡಿದ್ದರು. ಇದೇ ರೀತಿ ಆರೋಪಿಗಳು ಹೊರ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಬೈಕ್ ಕಳ್ಳತನದಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಾಹಿತಿಯನ್ನು ರಾಜ್ಯದ ಇತರ ಪೊಲೀಸ್ ಠಾಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಆನಂದಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *