ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿಹೋದ 3 ಮಕ್ಕಳು- ಸಿಡಿಲು ಬಡಿದು ವ್ಯಕ್ತಿ ಸಾವು

ಚಾಮರಾಜನಗರ/ ವಿಜಯಪುರ: ರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು, ಮಳೆ ಅವಾಂತರಕ್ಕೆ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಹೊಲದಲ್ಲಿದ್ದ ತಂದೆ-ತಾಯಿಯನ್ನು ನೋಡಲು ತೆರಳುತ್ತಿದ್ದ ಮೂವರು ಮಕ್ಕಳು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಮಹದೇಶ್ವರ ಬೆಟ್ಟದ ಪೊನ್ನಾಚ್ಚಿ ಸಮೀಪದ ರಾಮೇಗೌಡನದೊಡ್ಡಿ ಗ್ರಾಮದ ಅನುಪಮಾ (5), ನಿಖಿತಾ (6) ಹಾಗೂ ಪ್ರಣೀತಾ (5) ಮೃತ ಮಕ್ಕಳು. ಮಕ್ಕಳು ಹೊಲಕ್ಕೆ ಹೋಗುತ್ತಿದ್ದಾಗ ಗ್ರಾಮದ ಸಮೀಪದಲ್ಲಿ ಹರಿಯುವ ದೊಡ್ಡಮಡಿಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿಯ ಗ್ರಾಮದ ಶ್ರೀಮಂತ ಮಂದೇವಾಳಿ (55) ಮೃತ ದುರ್ದೈವಿ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಘಟನೆ ನಡೆದಿದೆ. ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗದ ಅಂಜಳ ಗ್ರಾಮದಲ್ಲಿ ಸಿಡಿಲು ಬಡಿದು 4 ಮೇಕೆ ಸಾವನ್ನಪ್ಪಿವೆ. ಅಂಜಳ ಗ್ರಾಮದ ಭೀಮಪ್ಪ ಫಿರಂಗಿ ಅವರಿಗೆ ಸೇರಿದ ಮೇಕೆಗಳು ಇವಾಗಿದ್ದು, 2 ಮೇಕೆಗಳಿಗೆ ಗಂಭೀರ ಗಾಯವಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧಾರವಾಡ ಬೆಳಗಾವಿ ಗಡಿಯ ತುಪ್ರಿ ಹಳ್ಳ ತುಂಬಿ ಹರಿಯುತ್ತಿದ್ದು, ರಾಜ್ಯ ಹೆದ್ದಾರಿಯ ಹಾರೋಬೆಳವಡಿ ಸೇತುವೆ ಮುಳುಗಡೆಯಾಗಿದೆ. ವಾಹನ ಸವಾರರು ಪರದಾಡುತ್ತದ್ದಾರೆ.

Comments

Leave a Reply

Your email address will not be published. Required fields are marked *