ಜನತಾ ಕರ್ಫ್ಯೂಗೆ ಚಾಮರಾಜನಗರದಲ್ಲಿ ಬೆಂಬಲ- ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ

ಚಾಮರಾಜನಗರ: ಕೊರೊನಾ ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಗಡಿನಾಡು ಚಾಮರಾಜನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲ ವರ್ಗದ ಜನತೆ ಬೆಂಬಲ ವ್ಯಕ್ತಪಡಿಸಿದ್ದು ಇಡೀ ಚಾಮರಾನಗರ ಬಹುತೇಕ ಸ್ತಬ್ಧವಾಗಿದೆ. ಅಂಗಡಿಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ. ಹೋಟೆಲ್ ಗಳು ಮುಚ್ಚಿವೆ. ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು ಬಸ್ ಕೆಎಸ್‍ನಿಲ್ದಾಣ ಬಿಕೋ ಎನ್ನುತ್ತಿದೆ.

ಇನ್ನೊಂದೆಡೆ ಚಾಮರಾಜನಗರದಿಂದ ಹೊರಡುವ ಎಲ್ಲಾ ಆರು ರೈಲುಗಳನ್ನು ರದ್ದುಪಡಿಸಲಾಗಿದ್ದು, ರೈಲು ನಿಲ್ದಾಣವೂ ಬಿಕೋ ಎನ್ನುತ್ತಿದೆ. ಆಟೋಗಳು ಸಹ ರಸ್ತೆಗಿಳಿದಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಡ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಒಟ್ಟಾರೆ ಬಹುತೇಕ ಎಲ್ಲ ವರ್ಗದ ಜನತೆ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಕೊರೊನಾ ಹರಡುವುದನ್ನು ತಡೆಗಟ್ಟುವುದಕ್ಕೆ ಸಹಕಾರ ನೀಡಿದ್ದಾರೆ.

ಬಿಕೋ ಎನ್ನುತ್ತಿದೆ ಮಾದಪ್ಪನ ಸನ್ನಿಧಿ:
ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರಬೆಟ್ಟ ಸಂಪೂರ್ಣ ಸ್ತಬ್ಧವಾಗಿದೆ. ಸದಾ ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಾದಪ್ಪನ ಸನ್ನಿಧಿ ಇಂದು ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ. ಮಲೆಮಹದೇಶ್ಚರನ ದರ್ಶನಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಕರೆನೀಡಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಯಾವುದೇ ಭಕ್ತರು ಮಹದೇಶ್ವರ ಬೆಟ್ಟದತ್ತ ಸುಳಿದಿಲ್ಲ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹದೇಶ್ವರ ದೇವಾಲಯ ಬಂದ್ ಆಗಿದ್ದು ದೇವಾಲಯದ ಪ್ರಮುಖ ದ್ವಾರಗಳಿಗೆ ಬೀಗ ಹಾಕಲಾಗಿದೆ. ಜನತಾ ಕರ್ಫ್ಯೂಗೆ ಮಹದೇಶ್ವರನ ಬೆಟ್ಟದಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *