ನಾನೊಬ್ಬ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ – ಅದಕ್ಕೂ ಮಿಗಿಲಾಗಿ ನಾನೊಬ್ಬ ಕಾಡು ಮನುಷ್ಯ: ದರ್ಶನ್ ಡಿಚ್ಚಿ

ಮಂಡ್ಯ: ಸರ್ ನಾನೊಬ್ಬ ಹಿಂದೂ, ಮುಸ್ಲಿಂ, ಕ್ರಿಸ್ಚಿಯನ್. ಅದಕ್ಕೂ ಮಿಗಿಲಾಗಿ ನಾನೊಬ್ಬ ಕಾಡು ಮನುಷ್ಯ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸದ ಶಿವರಾಮೇಗೌಡರ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ್ದಾರೆ.

ಸುಮಲತಾ ನಾಯ್ಡು, ದರ್ಶನ್ ನಾಯ್ಡು ಎಂದು ಹೇಳಿಕೆ ನೀಡಿದ ವಿಚಾರದ ಬಗ್ಗೆ ಕೇಳಿದ್ದಕ್ಕೆ ದರ್ಶನ್ ನಾನೊಬ್ಬ ಕಾಡು ಮನುಷ್ಯ ಎಂದು ಹೇಳಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರಕ್ಕೆ ಬಂದಿದ್ದಾಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 100 ವೋಟ್ ಕೂಡ ಬೀಳಲಿಲ್ಲ ಎನ್ನುವ ಜಿ.ಟಿ ದೇವೇಗೌಡ ಅವರ ಹೇಳಿಕೆಗೆ, 100 ಅಲ್ಲ ಸರ್, ಬರೀ 50 ವೋಟ್ ಬೀಳಲಿ ಬಿಡಿ ಎಂದರು. ಜನರಿಗೆ ಗೊಂದಲ ಆಗದೇ ಇರಲು ಸುಮಲತಾ ಅವರ ಚಿಹ್ನೆ ಹಾಗೂ ಕ್ರಮ ಸಂಖ್ಯೆಯನ್ನು ಜನರಿಗೆ ಹೇಳುತ್ತಿದ್ದೇನೆ ಎಂದು ಈ ವೇಳೆ ತಿಳಿಸಿದರು.

ನಟ ಪ್ರೇಮ್ ಹಾಗೂ ರವಿ ಚೇತನ್ ಜೊತೆ ಮಂಡ್ಯದ ವಿವಿಧ ಕಡೆ ದರ್ಶನ್ ಬೆಳಗ್ಗೆಯಿಂದ ಪ್ರಚಾರ ನಡೆಸ್ತಿದ್ದಾರೆ. ಇದೇ ವೇಳೆ ನೆನಪಿರಲಿ ಪ್ರೇಮ್ ಮಾತನಾಡಿ, ಪ್ರಚಾರ ಹೇಗೆ ನಡೆಯುತ್ತಿದೆ ಎಂಬ ಸಾಕ್ಷಿ ಬೇಕಿಲ್ಲ. ಏಕೆಂದರೆ ಬೆಳಗ್ಗೆಯಿಂದ ಮಾಧ್ಯಮದವರು ನಮ್ಮ ಹಿಂದೆಯೇ ಬರುತ್ತಿದ್ದಾರೆ. ಕ್ಯಾಮೆರಾಗೆ ಯಾರು ಮೋಸ ಮಾಡುವುದಕ್ಕೆ ಆಗಲ್ಲ. ಎಷ್ಟು ಚೆನ್ನಾಗಿ ಮಂಡ್ಯ ಜನತೆ ಸ್ವಾಗತ ಮಾಡುತ್ತಿದ್ದಾರೆ. ಈ ಎಲ್ಲ ಪ್ರೀತಿಯನ್ನು ನೋಡಿದರೆ, ಸುಮಲತಾ ಅಂಬರೀಶ್ ಅವರು ಭಾರೀ ಬಹುಮತದಿಂದ ಖಂಡಿತವಾಗಿ ಗೆದ್ದೇ ಗೆಲ್ಲುತ್ತಾರೆ ಎನ್ನುವ ಆಶ್ವಾಸನೆ ನಮಗೆ ಸಿಕ್ಕಿದೆ ಎಂದರು.

ನೀತಿ ಸಂಹಿತೆಯ ಪ್ರಕಾರ ಎಲ್ಲಿಯವರೆಗೂ ಪ್ರಚಾರ ಮಾಡಲು ಅವಕಾಶ ಇದೆಯೋ ಅಲ್ಲಿಯವರೆಗೂ ಮಂಡ್ಯಕ್ಕೆ ನಾವು ಪ್ರಚಾರಕ್ಕೆ ಬರುತ್ತೇವೆ. ಅಂಬರೀಶ್ ಅಣ್ಣ ಮೇಲಿರುವ ಋಣ ತೀರಿಸಿಕೊಳ್ಳಲು ಒಂದು ಅವಕಾಶ ಸಿಕ್ಕಿದೆ. ಅವರ ಕನಸುಗಳು ಏನಿತ್ತು ಅದು ಅರ್ಧ ಉಳಿದುಕೊಂಡಿದೆ. ಅದನ್ನು ಸುಮಲತಾ ಅವರು ಗೆಲ್ಲುವುದರ ಮುಖಾಂತರ ಮಂಡ್ಯದ ಜನತೆಗೆ ಅವರ ಕನಸನ್ನು ನನಸು ಮಾಡುವಂತಹ ಅವಕಾಶವನ್ನು ಎಲ್ಲರು ಮಾಡಿಕೊಡಿ ಎಂದು ಮಂಡ್ಯ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಪ್ರೇಮ್ ಹೇಳಿದರು.

Comments

Leave a Reply

Your email address will not be published. Required fields are marked *