ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ದರ್ಶನ್ ಸಿಡಿಮಿಡಿ!

ಮೈಸೂರು: ಕಾರು ಅಪಘಾತಕ್ಕೀಡಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಟ ದರ್ಶನ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೇ ದಾಸ ಮಾಧ್ಯಮಗಳ ವಿರುದ್ಧ ಗರಂ ಆದ್ರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗುದಾದಾ, ಆಸ್ಪತ್ರೆಯಲ್ಲಿ ಇದ್ದಕೊಂಡು ನಾನು ಎಲ್ಲ ನ್ಯೂಸ್ ಚಾನೆಲ್‍ಗಳನ್ನು ನೋಡಿದ್ದೇನೆ. ಊಹಾಪೋಹಗಳ ಮೇಲೆ ನೀವೇ ಎಲ್ಲವನ್ನೂ ನಿರ್ಧಾರ ಮಾಡಿಬಿಟ್ಟರೆ ಹೇಗೆ? ಕಾರಿನಲ್ಲಿ ಯುವತಿಯೊಬ್ಬರು ಇದ್ದರು ಅಂತ ವರದಿ ಮಾಡಿದ್ದೀರಿ. ಒಬ್ಬರಲ್ಲ ನಾಲ್ವರು ನನ್ನ ತೊಡೆಯ ಮೇಲೆ ಕುಳಿತಿದ್ದರು ಎಂದು ಕಿಡಿಕಾರಿದರು.

ಒಂದು ತಿಂಗಳ ವಿಶ್ರಾಂತಿ ಬಳಿಕ ಜಿಮ್ ಮಾಡುತ್ತೇನೆ. ನಾನು ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಿಲ್ಲ. ನೋಡಿ ಮೈಕಟ್ಟು ಹೇಗಿದೆ ಅಂತಾ ತಮ್ಮ ಬಲಗೈ ತೋಳುಗಳನ್ನು ತೋರಿಸಿದರು. ವೈದ್ಯರು ಕಾಳಜಿಯಿಂದ ನೋಡಿಕೊಂಡಿದ್ದಾರೆ. ತುರ್ತು ಚಿಕಿತ್ಸೆಯ ವ್ಯವಸ್ಥೆ ಚೆನ್ನಾಗಿದ್ದು, ವೈದ್ಯರ ಕಾಳಜಿಯಿಂದ ಬೇಗ ಗುಣಮುಖನಾದೆ ಎಂದು ತಿಳಿಸಿದರು.

ಕಾರು ಸ್ಥಳಾಂತರ ಕುರಿತು ಪ್ರತಿಕ್ರಿಯೆ ನೀಡಿದ ದರ್ಶನ್, ಅಪಘಾತದ ಸ್ಥಳದಲ್ಲಿಯೇ ಕಾರು ಬಿಟ್ಟು ಹೋಗಿದ್ದರೆ ಸಂಚಾರಕ್ಕೆ ಅಡತಡೆ ಆಗುತ್ತಿತ್ತು. ಜೊತೆಗೆ ಅದು ಅಪರಾಧ ಕೂಡಾ. ಹೀಗಾಗಿ ಕಾರನ್ನು ಬೇರೆ ಕಡೆಗೆ ಸಾಗಿಸಲಾಯಿತು. ಇದು ತಪ್ಪಾ, ಕಾರು ಡಿಕ್ಕಿ ಹೊಡೆದಿದ್ದಕ್ಕೆ ಕಂಬ ಬಿದ್ದಿಲ್ಲ. ಅದು ಮೊದಲೇ ಬಿದ್ದಿತ್ತು ಎಂದು ಸಿಡಿಮಿಡಿಯಾದರು.

ನನ್ನ ಗಾಡಿಯಲ್ಲಿ ಇರುವುದೇ ನಾಲ್ಕು ಸೀಟ್, ಹೀಗಾಗಿ ನಾಲ್ಕು ಜನ ಮಾತ್ರ ಇದ್ದೇವು. ಆದರೆ ಐವರು ಇದ್ದರು ಅಂತಾ ಹೇಳುವುದು ಸರಿಯಲ್ಲ ಎಂದ ಅವರು, ಎಫ್‍ಐಆರ್ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅದನ್ನು ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಆಸ್ಪತ್ರೆಯಿಂದ ಕಾಲ್ಕಿತ್ತರು.

ಇದಕ್ಕೂ ಮುನ್ನ ದಾಸನಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ ವೈದ್ಯರೊಬ್ಬರು ಮಾತನಾಡಿ, ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಮೂಳೆ ಮುರಿದಿದೆ. ಕೆಲವು ದಿನಗಳು ವಿಶ್ರಾಂತಿ ಬೇಕಾಗುತ್ತದೆ. ಅವರು ನೋವನ್ನು ತಡೆದುಕೊಂಡು, ಅಭಿಮಾನಿಗಳಿಗೆ ಸ್ಪಂದಿಸಿದ್ದು ನೋಡಿ ಖುಷಿ ಆಯಿತು. ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *